ಬೆಳಗಾವಿ ನಗರದಲ್ಲಿ ಸ್ವಚ್ಛತೆ ಕುರಿತು ಕಾರ್ಯಚರಣೆ ನಡೆಸಿದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ ನೇತೃತ್ವದ ಅಧಿಕಾರಿ, ಸಿಬ್ಬಂದಿ ವರ್ಗ. 
ಬೆಳಗಾವಿ

ಕಸ ಎಸೆಯುವವರ ವಿರುದ್ಧ ಪಾಲಿಕೆ ಸಮರ

ಮಂಜುನಾಥ ಕೋಳಿಗುಡ್ಡ
ಬೆಳಗಾವಿ:ಮಹಾನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ, ಟನ್‌ಗಟ್ಟಲೇ ತ್ಯಾಜ್ಯ ಸಂಗ್ರಹಿಸಿಟ್ಟುಕೊಳ್ಳುತ್ತಿರುವ ಹೋಟೆಲ್, ಆಸ್ಪತ್ರೆ, ರೆಸ್ಟೋರೆಂಟ್ ವಿರುದ್ಧ ಸಮರ ಸಾರಿರುವ ಪಾಲಿಕೆ ಆರೋಗ್ಯ,ಘನತ್ಯಾಜ್ಯ ನಿರ್ವಹಣೆ ಘಟಕ ಒಂದೇ ವಾರದಲ್ಲಿ ಬರೋಬ್ಬರಿ 4.50 ಲಕ್ಷ ರೂ. ದಂಡ ವಸೂಲಿ ಮಾಡಿದೆ.
ಪಾಲಿಕೆ 58 ವಾರ್ಡ್ ವ್ಯಾಪ್ತಿಯ ಜನವಸತಿ, ಮಾರುಕಟ್ಟೆ ಪ್ರದೇಶ, ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ಕಸ ಎಸೆಯುವವರ, ಪ್ಲಾಸ್ಟಿಕ್ ಬಳಕೆ ಮಾಡುವವರು ಹಾಗೂ ಹಸಿ ಮತ್ತು ಒಣ ಕಸ ಪ್ರತ್ಯೇಕಿಸದೆ ಮಿಶ್ರಣ ಮಾಡಿ ಕೊಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುತ್ತಿದ್ದಾರೆ. ಖಾಸಗಿ, ಸರ್ಕಾರಿ ಆಸ್ಪತ್ರೆ, ಶಾಲಾ-ಕಾಲೇಜು ಆವರಣ, ಕೈಗಾರಿಕೆ ಪ್ರದೇಶದಲ್ಲಿ ವಿಶೇಷ ಕಾರ್ಯಚರಣೆ ಮೂಲಕ ಪಾಲಿಕೆ ಸಿಬ್ಬಂದಿ ಬಿಸಿ ಮುಟ್ಟಿಸಿದ್ದಾರೆ.
ಕಳೆದ ನಾಲ್ಕೈದು ತಿಂಗಳ ಅವಧಿಯಲ್ಲಿ ಬೇಕಾಬಿಟ್ಟಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದವರ ಮನೆ ಮುಂದೆ, ಸಾರ್ವಜನಿಕರ ಸ್ಥಳದಲ್ಲಿ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸಲಾಗಿತ್ತು. ಆದರೆ, ನಾಗರಿಕರು, ಅಂಗಡಿಕಾರರು ರಾತ್ರಿ ಸಮಯದಲ್ಲಿ ಹಸಿ ಮತ್ತು ಒಣ ಕಸ ಎಸೆದು ಹೋಗುತ್ತಿರುವವರ ಪತ್ತೆಗಾಗಿ ಪ್ರತ್ಯೇಕ ತಂಡ ರಚನೆ ಮಾಡಿ ಕಾರ್ಯಚರಣೆ ನಡೆಸಿ ಪತ್ತೆ ಹಚ್ಚಿ ದಂಡ ವಿಧಿಸಿದ್ದರು. ಅಲ್ಲದೆ, ಮನೆಗಳಿಗೆ ವಿದ್ಯುತ್, ಕುಡಿಯುವ ನೀರು ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ನಗರದ ಪ್ರತಿಷ್ಠಿತ ಹೋಟೆಲ್, ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಕಟ್ಟಡದ ಮೇಲೆ ದಾಳಿ ನಡೆಸಿ ತ್ಯಾಜ್ಯ ಪತ್ತೆ ಹಚ್ಚಿ ದಂಡ ವಿಧಿಸುತ್ತಿದ್ದಾರೆ. ಫೆ.24 ರಿಂದ ಫೆ.26 ರಂದು ಹೋಟೆಲ್, ಆಸ್ಪತ್ರೆ ತಲಾ 37 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ಬಾಕಿ ಉಳಿಸಿಕೊಂಡಿರು ಕಸ ತೆರಿಗೆ ಕಟ್ಟಲು ಗಡುವು ವಿಧಿಸಿದ್ದಾರೆ. ಹೀಗಾಗಿ ಹೋಟೆಲ್, ಆಸ್ಪತ್ರೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಕಸ ವಿಲೇವಾರಿ ಮಾಡಬೇಕು. 2 ರಿಂದ 4 ದಿನ ಕಸ ಸಂಗ್ರಹಿಸಿಕೊಂಡರೆ ಸೌಲಭ್ಯ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.......................
ಬಾಕ್ಸ್
ಮಾರ್ಚ್1ರಿಂದ ಕಠಿಣ ನಿಯಮ ಜಾರಿ
* ಹಸಿ, ಒಣ ಕಸ ಮಿಶ್ರಣ ಮಾಡುವವರ ಸ್ಥಳದಲ್ಲಿಯೇ ದಂಡ
* ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಡಿತ
* ವಾಣಿಜ್ಯ ಪರವಾನಗಿ ರದ್ದು
* ಕೈಗಾರಿಕೆ, ಹೋಟೆಲ್ ವಿರುದ್ಧ ಪ್ರತ್ಯೇಕ ಕಾರ್ಯಚರಣೆ
* ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆ, ಪ್ಲಾಸ್ಟಿಕ್ ಎಸೆದವರ ಮೇಲೆ ಕೇಸ್ ದಾಖಲು
.........................
ಕೋಟ್ಸ್
ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಟೆಲ್, ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಿಗೆ ಸ್ವಚ್ಛತೆ, ಕಸ ವಿಲೇವಾರಿ ಕುರಿತು ಜಾಗೃತಿ ಜತೆಗೆ ಎಚ್ಚರಿಕೆ ನೀಡಲಾಗಿದೆ. ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿಕೊಡುವುದು, ಸ್ವಚ್ಛತೆ ಕಾಪಾಡುವುದು, ಪ್ಲಾಸ್ಟಿಕ್ ಬಳಕೆ ಮಾಡದಿರುವ ಕುರಿತು ನಗರದ ಹೋಟೆಲ್ ಮಾಲೀಕರ ಸಭೆ ಕರೆಯಲಾಗಿದೆ.
- ಹಣಮಂತ ಕಲಾದಗಿ, ಪಾಲಿಕೆಯ ಆರೋಗ್ಯ ಅಧಿಕಾರಿ
.................