ಬೆಳಗಾವಿ ನಗರದಲ್ಲಿ ಶುಕ್ರವಾರ ನಾಲಾ ಹೂಳೆತ್ತುವ ಕಾಮಗಾರಿಗೆ ಆಯುಕ್ತ ಕಾರ್ತಿಕ್ ಎಂ. ಚಾಲನೆ ನೀಡಿ ಪರಿಶೀಲಿಸಿದರು. 
ಬೆಳಗಾವಿ

ನಗರಾದ್ಯಂತ ನಾಲಾ ಸ್ವಚ್ಛತೆಗೆ ಪಾಲಿಕೆ ಚುರುಕು

ಬೆಳಗಾವಿ:ಅಕಾಲಿಕ ಮಳೆಯಿಂದ ನಾಲಾ, ಚರಂಡಿಯಿಂದ ಉದ್ಬವಿಸುತ್ತಿರುವ ಸಮಸ್ಯೆಗಳಿಂದ ಕೊನೆಗೂ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆಯು ನಗರಾದ್ಯಂತ ನಾಲಾ ಹೂಳೆತ್ತುವ ಮತ್ತು ಚರಂಡಿ ಸ್ವಚ್ಛತಾ ಕಾರ್ಯ ತೀವ್ರಗೊಳಿಸಿದೆ. ಮತ್ತೊಂದೆಡೆ ನಾಲಾ ಒತ್ತುವರಿ ಸರ್ವೇ ಆರಂಭಿಸುವ ಮೂಲಕ ಅಕ್ರಮದಾರರಿಗೆ ಬಿಸಿ ಮುಟ್ಟಿಸಿದೆ.
ಕಳೆದ ನಾಲ್ಕೈದು ವಾರಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಚರಂಡಿ, ನಾಲಾ ಭರ್ತಿಯಾಗಿ ನೀರು ರಸ್ತೆಯ ಮೇಲೆ ಹರಿದು ತಗ್ಗು ಪ್ರದೇಶಗಳಿಗೆ ನುಗ್ಗಿ ಸಮಸ್ಯೆ ಸೃಷ್ಟಿಸಿತು. ಈ ಕುರಿತು ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ಪಾಲಿಕೆ ಸದಸ್ಯರ ಒತ್ತಾಯಕ್ಕೆ ಮಣಿದು ಪಾಲಿಕೆ ಅಧಿಕಾರಿಗಳು ಮಳೆಗಾಲದ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ನಾಲಾಗಳಲ್ಲಿನ ತುಂಬಿರುವ ಹೂಳೆತ್ತಲು ಶುಕ್ರವಾರ ಚಾಲನೆ ನೀಡಿದೆ.
ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿರುವ ಲೆಂಡೇ ನಾಲಾ, ಝಕ್ಕರೆ ನಾಲಾ, ಕೋನ್ವಾಳಗಳಲ್ಲಿ ನಾಲಾ, ನಾಗಜರಿ ನಾಲಾ, ಹಳೆ ಪಿಬಿ ರಸ್ತೆ ನಾಲಾ ಹೀಗೆ ವಿವಿಧ ಭಾಗದಲ್ಲಿ ನಾಲಾಗಳು ಸಮರ್ಪಕವಾಗಿ ನಿರ್ವಹಣೆ ಇಲ್ಲದೆ ಹೂಳುಗಳಿಂದ ತುಂಬಿವೆ. 12 ರಿಂದ 150 ಕಿಮೀ ಉದ್ದದ ಮಧ್ಯಮ ಗಾತ್ರದ ನಾಲಾಗಳು, ಚರಂಡಿಗಳು ಸ್ವಚ್ಛ ಗೊಳಿಸುವ ಕೆಲಸ ಆರಂಭಿಸಲಾಗುತ್ತಿದೆ.ಈ ನಾಲಾಗಳನ್ನು ಮಳೆಗಾಲ ಆರಂಭವಾಗುವ ಮುಂಚೆಯೇ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುವುದು.
ನಾಲಾಗಳನ್ನು ಜೆಸಿಬಿ ಯಂತ್ರಗಳ ಮೂಲಕ ನಾಲಾ ಸ್ವಚ್ಛತಾ ಕಾಮಗಾರಿ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟಿದ್ದು, ನಾಲಾ ಅಭಿವೃದ್ಧಿಗೊಳಿಸಲಾಗುತ್ತಿದೆ. ಅಲ್ಲದೆ, ಎಲ್ಲೆಲ್ಲಿ ಒತ್ತುವರಿಯಾಗಿರುವ ನಾಲಾಗಳನ್ನು ಪತ್ತೆ ಹಚ್ಚಿ ಅವುಗಳನ್ನು ತೆರೆವುಗೊಳಿಸಲು ಹಾಗೂ ಗಾಳಿ-ಮಳೆಯಿಂದ ಅಪಾಯಕ್ಕೆ ಕಾರಣವಾಗಬಹುದಾದ ಮರಗಳ ಕೊಂಬೆಗಳನ್ನು ಕಡಿದು ತೆರವುಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.
.................
ಕೋಟ್ಸ್
ಮಳೆಗಾಲ ಆರಂಭಕ್ಕೂ ಮುನ್ನವೇ ನಾಲಾ ಮತ್ತು ಚರಂಡಿಗಳ ಸ್ವಚ್ಛತೆ, ಹೂಳೆತ್ತುವ ಕೆಲಸ ಮುಗಿಯಲಿದೆ. ಮಳೆಯ ನೀರು ಸರಾಗವಾಗಿ ಹರಿಯುವಂತೆ ಸ್ವಚ್ಛತಾ ಕ್ರಮ ವಹಿಸಲಾಗಿದೆ. ಸಮಸ್ಯೆಗಳ ತ್ವರಿತ ನಿವಾರಣೆಗೆ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
- ಕಾರ್ತಿಕ್ ಎಂ, ಮಹಾನಗರ ಪಾಲಿಕ ಆಯುಕ್ತ.
.........