ಮಹಾನಗರ ಪಾಲಿಕೆ 
ಬೆಳಗಾವಿ

ಪಾಲಿಕೆ 89 ವಾಣಿಜ್ಯ ಮಳಿಗೆ ಟೆಂಡರ್ ನನೆಗುದಿಗೆ!

ಬೆಳಗಾವಿ ಮಹಾನಗರ ಪಾಲಿಕೆಯ ಶಾಶ್ವತ ಆದಾಯ ಮೂಲಗಳಲ್ಲಿ ಒಂದಾಗಿರುವ ‘ವಾಣಿಜ್ಯ ಮಳಿಗೆ’ಗಳ ಮಾಸಿಕ ಬಾಡಿಗೆ ಗುತ್ತಿಗೆ ಅವಧಿ ಟೆಂಡರ್ ಅರ್ಧಕ್ಕೆ ನನೆಗುದಿಗೆ ಬಿದ್ದಿದೆ! ಮತ್ತೊಂದೆಡೆ ಮಳಿಗೆ ಗುತ್ತಿಗೆಗಾಗಿ ರಾಜಕೀಯ ಜಿದ್ದಾಜಿದ್ದಿಗೆ ಎಡೆ ಮಾಡಿಕೊಟ್ಟಿದೆ.
ಹೌದು. ಪಾಲಿಕೆ ವ್ಯಾಪ್ತಿಯಲ್ಲಿ ಗಣಪತಿ ಗಲ್ಲಿ, ಕಸಾಯಿ ಗಲ್ಲಿ ಕುರಿ ಶೆಡ್, ಮೀನು ಮಾರುಕಟ್ಟೆ, ಮಟನ್ ಮಾರ್ಕೆಟ್, ಅಶೋಕ ನಗರ ಸ್ಪೋಟ್ಸ್ ಕಾಂಪ್ಲೆಕ್ಸ್, ರವಿವಾರ ಪೇಟ, ಕೋಲಕಾರ ಮಾರ್ಕೆಟ್, ಸಿಬಿಟಿ ವಾಣಿಜ್ಯ ಸಂಕೀರ್ಣ, ಮಾಳಮಾರುತಿ ಬಡಾವಣೆ, ಡಬಲ್ ರಸ್ತೆ, ಸಿಬಿಟಿ ಮಿನಿ ವಾಣಿಜ್ಯ ಸಂಕೀರ್ಣ ಸೇರಿ ವಿವಿಧ ಭಾಗಗಳಲ್ಲಿ 89 ವಾಣಿಜ್ಯ ಮಳಿಗೆಗಳಿವೆ. ಈ ಮಳಿಗೆಗಳಿಂದ ವಾರ್ಷಿಕ ಕೋಟ್ಯಂತರ ರೂ. ಆದಾಯ ನಿರೀಕ್ಷೆಯಲ್ಲಿರುವ ಪಾಲಿಕೆಗೆ ಟೆಂಡರ್ ಪ್ರಕ್ರಿಯೇ ಸ್ಥಗೀತಗೊಳ್ಳುವ ಮೂಲಕ ಆರಂಭದಲ್ಲಿಯೇ ಹಿನ್ನಡೆಯಾದ್ದು, ಪಾಲಿಕೆಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಹೊಡೆತ ಬಿದ್ದಂತಾಗಿದೆ.
ಪಾಲಿಕೆಯ ಆರ್ಥಿಕ ಸ್ಥಾಯಿ ಸಮಿತಿ ಕೈಗೊಂಡ ನಿರ್ಣಯದ ಮೇಲೆ ನಗರದಲ್ಲಿರುವ ಒಟ್ಟು 89 ವಾಣಿಜ್ಯ ಮಳಿಗೆಗಳನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ 12 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು 2026 ಜನವರಿ 2ರಲ್ಲಿ ಇ-ಹರಾಜನ್ನು ಪೋರ್ಟ್‌ಲ್ ಮುಖಾಂತರ ಮೂಲಕ ಆಹ್ವಾನಿಸಲಾಗಿದೆ.ಶೇ.18ರಷ್ಟು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಡಲಾಗಿದೆ. ಶೇ.50ಕ್ಕಿಂತ ಹೆಚ್ಚಾಗಿ ಅಂಗವಿಕಲತೆ ಹೊಂದಿದವರಿಗೆ ಅಂಗಡಿಗಳನ್ನು ಮೀಸಲಿಡಲಾಗಿದೆ. ಈ ಮಳಿಗೆಗಳ ಟೆಂಡರ್‌ನಿಂದ 4 ಕೋಟಿ ರೂ. ವರೆಗೆ ಠೇವಣಿ ಸಂಗ್ರಹ ಹಾಗೂ ಆಯಾ ಪ್ರದೇಶದ ಬಾಡಿಗೆ ದರದ ಅನುಗುಣವಾಗಿ ಪಾಲಿಕೆಗೆ ಮಾಸಿಕ 15 ರಿಂದ 20 ಲಕ್ಷ ರೂ. ವರೆಗೆ ಬಾಡಿಗೆ ಅಂದಾಜಿಸಿದೆ.ಆದರೆ, ತಾಂತ್ರಿಕ ಸಮಸ್ಯೆ, ಟೆಂಡರ್‌ನಲ್ಲಿ ಕೇವಲ ಐದು ಜನರು ಭಾಗವಹಿಸಿದ್ದಾರೆ ಎಂಬ ನೆಪದಲ್ಲಿ ಟೆಂಡರ್ ಪ್ರಕ್ರಿಯೇ ಸಂಪೂರ್ಣ ಸ್ಥಗೀತಗೊಳಿಸಲಾಗಿದೆ. ಬಳಿಕ ಹೊಸ ಟೆಂಡರ್ ಕರೆಯದಿರುವುದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
............
ಬಾಕ್ಸ್
ಬಡವರ ಹೆಸರಲ್ಲಿ ಬಲಾಢ್ಯರ ಟೆಂಡರ್ ಬೇಡ
ನಗರ ಪ್ರದೇಶದಲ್ಲಿರುವ ಎಸ್‌ಸಿ,ಎಸ್‌ಟಿ ವರ್ಗದವರು, ಬಡವರು, ಅಂಗಕವಿಲ ವ್ಯಾಪಾರಿಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ಮಾಸಿಕ ಕಡಿಮೆ ದರದಲ್ಲಿ ಸರ್ಕಾರಿ ವಾಣಿಜ್ಯ ಮಳಿಗೆಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತಿದೆ. ಆದರೆ, ಪಾಲಿಕೆಯ ವಾಣಿಜ್ಯ ಮಳಿಗೆಗಳ ಟೆಂಡರ್ ಪ್ರಕ್ರಿಯೇಯಲ್ಲಿ ಬಡವರ ಹೆಸರಿನಲ್ಲಿ ಆರ್ಥಿಕ ಬಲಾಢ್ಯರು ಮಳಿಗೆ ಪಡೆದುಕೊಂಡು ಹೆಚ್ಚಿನ ಬಾಡಿಗೆ ದರಕ್ಕೆ ಬೇರೆಯವರಿಗೆ ನೀಡುತ್ತಿದ್ದಾರೆ. ಇದರಿಂದಾಗಿ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ರೂ. ಬಾಡಿಗೆ ನಷ್ಟವಾಗುತ್ತಿದೆ. ಜತೆಗೆ ಠೇವಣಿ ಕೂಡ ಸಂಗ್ರಹವಾಗುತ್ತಿಲ್ಲ. ಹೀಗಾಗಿ ವ್ಯಾಪಾರು ನಡೆಸುವವರಿಗೆ ಮಾತ್ರ ಮಳಿಗೆ ಟೆಂಡರ್ ನೀಡಬೇಕು ಎಂದು ವ್ಯಾಪಾರಿಗಳು, ಪಾಲಿಕೆಯ ಮಾಜಿ ಸದಸ್ಯರು ಆಗ್ರಹಿಸಿದ್ದಾರೆ.
..........................
ಬಾಕ್ಸ್
ಪಾಲಿಕೆ ವ್ಯಾಪ್ತಿಯ ಅಂದಾಜು ಆಸ್ತಿ ವಿವರರ
ವಿಭಾಗ ಅಂಕಿ ಸಂಖ್ಯೆ
ವಾಣಿಜ್ಯ ಮಳಿಗೆ 950
ಗುತ್ತಿಗೆ ಆಸ್ತಿ 453
ಖಾಲಿ ನಿವೇಶನ 380
ಕಟ್ಟಡಗಳು 450
ಇತರೆ ಆಸ್ತಿ 230
..........................
ಕೋಟ್ಸ್
ನಗರದ ವಿವಿಧ ಪ್ರದೇಶಗಳಲ್ಲಿರುವ ವಾಣಿಜ್ಯ ಮಳಿಗೆಗಳ ಮಾಸಿಕ ಬಾಡಿಗೆ ಆಧಾರದ ಮೇಲೆ ಗುತ್ತಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ ಐದು ಜನರು ಭಾಗವಹಿಸಿದ್ದರಿಂದ ಟೆಂಡರ್ ತಡೆಹಿಡಿಯಲವಾಗಿದೆ. ಇದೀಗ ಮಳಿಗೆಗಳನ್ನು ಪ್ರತ್ಯೇಕಿಸಿ ಟೆಂಡರ್ ಕರೆಯುವ ಕುರಿತು ಮಾರ್ಚ್ 2ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ.
-ಕಾರ್ತಿಕ್.ಎಂ. ಪಾಲಿಕೆ ಆಯುಕ್ತ
......................