ಬಸವಂತ ಕಡೋಲ್ಕರ್ (ಕಾರು ಚಾಲಕ) 
ಬೆಳಗಾವಿ

ಮೃಣಾಲ್ ಕಾರು ಚಾಲಕನ ಮೇಲೆ ಹಲ್ಲೆ

ಅರ್ಚನಾ ಜಾಧವ
ಬೆಳಗಾವಿ: ಇಲ್ಲಿನ ಕ್ಲಬ್ ರಸ್ತೆಯ ಪಾರ್ಕಿಂಗ್ ಜಾಗದಲ್ಲಿ ಮಂಗಳವಾರ ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕನ ಮೇಲೆ ದುಷ್ಕರ್ಮಿಗಳಿಬ್ಬರು ಹರಿತ ಆಯುಧದಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಕಾರು ಚಾಲಕ ಬಸವಂತ ಕಡೋಲ್ಕರ್ (32) ಗಾಯಗೊಂಡಿದ್ದಾರೆ. ಬೋಜಗಾ ಗ್ರಾಮದ ಶಿವು ಪೂಜಾರಿ, ಪರಶುರಾಮ ಬಡಿಗೇರ ಎಂಬುವವರು ಚಾಲಕನ ಎದೆ, ಭುಜ, ತೊಡೆ ಸೇರಿ ನಾಲ್ಕು ಕಡೆ ಚಾಕುವಿನಿಂದ ಇರಿದಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಬಸವಂತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲ ದಿನಗಳ ಹಿಂದೆ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಹಣಕಾಸಿನ ವ್ಯವಹಾರ ವಿಷಯವಾಗಿ ಪರಸ್ಪರರು ಗುಂಪು ಗಲಾಟೆ ಮಾಡಿಕೊಂಡಿದ್ದರು. ಇದೇ ವಿಷಯವಾಗಿ ದುಷ್ಕರ್ಮಿಗಳು ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಸಾಧ್ಯತೆ ಇದೆ. ಆರೋಪಿಗಳನ್ನು ಬಂಧಿಸಿದ ಬಳಿಕ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೂ ಭದ್ರತೆ ಹೆಚ್ಚಿಸಿದ್ದಾರೆ. ಘಟನೆ ಕುರಿತು ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.