ಬೆಳಗಾವಿಯಲ್ಲಿ ಶನಿವಾರ ಸಂಸದ ಜಗದೀಶ ಶೆಟ್ಟರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
ಬೆಳಗಾವಿ: ಇಲ್ಲಿನ ವಿಮಾನ ನಿಲ್ದಾಣ ಅಭಿವೃದ್ಧಿಗೆ ಅಗತ್ಯವಿರುವ ಭೂಮಿ ಕೊಡುವ ವಿಷಯದಲ್ಲಿ ವಾಯುಸೇನೆಯಿಂದ ಸಕಾರಾತ್ಮಕ ಸ್ಪಂದನೆ ಸಿಗದಿರುವ ವಿಷಯವನ್ನು ರಕ್ಷಣಾ ಸಚಿವರ ಹಾಗೂ ಸಂಸದೀಯ ರಕ್ಷಣಾ ಸಮಿತಿ ಗಮನಕ್ಕೂ ತಂದು ಸಮಸ್ಯೆ ಇತ್ಯರ್ಥಪಡಿಸುವುದಾಗಿ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿ ಶನಿವಾರ ರೇಲ್ವೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆಯಾ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಶೀಲಿಸಿದ ವೇಳೆ, ವಿಮಾನ ನಿಲ್ದಾಣ ಅಭಿವೃದ್ಧಿಗೆ ವಾಯಸೇನೆಯಿಂದ ಭೂಮಿ ಸಿಗದಿರುವುದು ವಿಳಂಬಕ್ಕೆ ಕಾರಣವೆಂದು ಅಧಿಕಾರಿಗಳು ತಿಳಿಸಿದಾಗ, ಶೀಘ್ರವೇ ಕೇಂದ್ರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಬೆಳಗಾವಿ-ಸಂಕೇಶ್ವರ ಮಾರ್ಗದಲ್ಲಿ ಆರು ಪಥದ ಹೆದ್ದಾರಿ ಕಾಮಗಾರಿ ನಿಧಾನ ಗತಿಯಲ್ಲಿದ್ದು, ಈ ಭಾಗದಲ್ಲಿ ಸಂಚಾರ ಸಿಕ್ಕು ಸಂಭವಿಸುತ್ತಿದೆ. ಅಧಿಕಾರಿಗಳು ಕಾರ್ಯೋನ್ಮುಖರಾಗಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಹಲಗಾ-ಮಚ್ಛೆ ಬೈಪಾಸ್ ಕಾಮಗಾರಿ ಗಡುವು ಪೂರ್ಣಗೊಂಡು ವರ್ಷವಾಗಿದೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕಾಮಗಾರಿ ಮುಗಿಸಬೇಕು. ಬೆಳಗಾವಿ-ಹುನಗುಂದ-ರಾಯಚೂರು ರಸ್ತೆ ನಿರ್ಮಾಣ ಫೇಸ್-1 ರಡಿ 43.8ಕಿಮೀ ಕಾಮಗಾರಿಗಾಗಿ 35ಕಿಮೀ ಭೂಸ್ವಾಧೀನ ಕಾರ್ಯ ಮುಕ್ತಾಯವಾಗಿದ್ದು, ಬರುವ ದಿನಗಳಲ್ಲಿ ಬಾಕಿ ಉಳಿದಿರುವ ಭೂ ಪ್ರದೇಶವನ್ನು ಸ್ವಾಧೀನ ಕೈಗೊಂಡು ಬೇಗ ಕಾಮಗಾರಿ ಪ್ರಾರಂಭಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಬೆಳಗಾವಿ-ಧಾರವಾಡ ನೂತನ ರೈಲು ಮಾರ್ಗಕ್ಕಾಗಿ 407 ಎಕರೆ ಜಮೀನು ಭೂಸ್ವಾಧೀನಕ್ಕೆ ರೈತರಿಗೆ ಪರಿಹಾರ ವಿತರಿಸಲು ಅಂದಾಜು 149 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಟಿಳಕವಾಡಿ ಹತ್ತಿರ ಎಲ್ಸಿ ನಂ. 381 ಹತ್ತಿರ ಎರಡನೆಯ ಲೈನ್ ನಿರ್ಮಾಣಕ್ಕೆ ಅವಶ್ಯವೆನಿಸಿರುವ ವಾಹನ ಸಂಚಾರ ಮಾರ್ಗ ಬದಲಿಸಲು ಪೊಲೀಸ್ ಇಲಾಖೆಯ ಆಯುಕ್ತರಿಂದ ಪರವಾನಿಗೆ ಕೇಳಲಾಗಿದೆ. ಎಲ್.ಸಿ ನಂ: 382 ಮತ್ತು 383 ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಕೆಲವು ಅಡತಡೆಗಳಿದ್ದು, ಅವುಗಳನ್ನು ಶೀಘ್ರ ಬಗಿಹರಿಸಿಕೊಂಡು ಕಾಮಗಾರಿ ಪ್ರಾರಂಭಿಸಲಾಗುವುದು. ಸುಳೇಭಾವಿ ಹತ್ತಿರ ರಸ್ತೆ ಮೇಲ್ಸೇತುವೆಯಿಂದ ರೈತರಿಗೆ ಆಗುತ್ತಿರುವ ಅನಾನುಕೂಲತೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಖಾನಾಪೂರ ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡದಿರುವ ಕಾರಣಕ ತಡವಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.
ವಿಶೇಷ ಭೂಸ್ವಾಧೀನ ಅಧಿಕಾರಿ ರಾಜಶ್ರೀ ಜೈನಾಪುರ, ಚೌಹಾಣ, ಕವಿತಾ ಯೋಗಪ್ಪನವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಭುವನೇಶ ಕುಮಾರ, ವಿಮಾನಯಾನ ಪ್ರಾಧಿಕಾರ ನಿರ್ದೇಶಕ ತ್ಯಾಗರಾಜನ್ ಇತರರಿದ್ದರು.