ಬೆಳಗಾವಿ: ನವದೆಹಲಿಯಿಂದ ಬೆಳಗಾವಿಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ್ದ ಮಹಾರಾಷ್ಟ್ರದ ಚಾಂದನಿಚೌಕ ಸಂಸದ ಪ್ರವೀಣ ಖಂಡೇಲವಾಲ್ ರ ಲಗೇಜ್ ಅವರಿಗೆ ತಲುಪದೆ ಪರದಾಡಿದ ಘಟನೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನವದೆಹಲಿಯಿಂದ 6ಇ-5237 ವಿಮಾನದಲ್ಲಿ ಬೆಳಗ್ಗೆ ಬೆಳಗಾವಿಗೆ ಖಂಡೇಲವಾಲ್ ಆಗಮಿಸಿದ್ದರು. ಆದರೆ, ಅವರ ಲಗೇಜ್ ಮಾತ್ರ ತಲುಪಿರಲಿಲ್ಲ. ಅದು ಎಲ್ಲಿದೆ ಎಂಬ ಬಗ್ಗೆಯೂ ಸ್ಪಷ್ಟತೆಯೂ ನೀಡಿರಲಿಲ್ಲ. ಈ ಕುರಿತು, ಆಕ್ರೋಶ ವ್ಯಕ್ತಪಡಿಸಿದ ಸಂಸದ, ಇದರಿಂದ ನಾನು ಮಾನಸಿಕ ವೇದನೆಗೆ ಒಳಗಾಗಿದ್ದೇನೆ. ಅಗತ್ಯ ಬಟ್ಟೆ ಮತ್ತು ವೈಯಕ್ತಿಕ ವಸ್ತುಗಳನ್ನು ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ನನ್ನ ಲಗೇಜ್‌ನಲ್ಲಿ ಬೆಲೆಬಾಳುವ ವಸ್ತು ಹಾಗೂ ದಾಖಲೆಗಳಿದ್ದವು. ಆದರೆ ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯ ಮತ್ತು ಕಳಪೆ ಲಗೇಜ್ ನಿರ್ವಹಣೆ ಸ್ವೀಕಾರಾರ್ಹವಲ್ಲ. ಒಬ್ಬ ಸಂಸದರಿಗೆ ಇಂತಹ ಅನುಭವವಾಗುವುದಾದರೆ, ಸಾಮಾನ್ಯ ಪ್ರಯಾಣಿಕರ ದುಸ್ಥಿತಿ ಊಹಿಸಿಕೊಳ್ಳಲೂ ಅಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು ಮಧ್ಯಪ್ರವೇಶಿಸಿ ಈ ಕುರಿತು ವಿಚಾರಣೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಪೋಸ್ಟ್‌ಗೆ ಎಕ್ಸ್‌ನಲ್ಲಿಯೇ ಇಂಡಿಗೋ ಸಂಸ್ಥೆ ಕ್ಷಮೆ ಕೇಳಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕರ ವಿಮಾನಯಾನ ಸಚಿವಾಲ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.