ವಿಚಾರ ಸಂಕಿರಣವನ್ನು ಲಕ್ಷ್ಮಣ ಸವದಿ ಉದ್ಘಾಟಿಸಿದರು. ಪರಪ್ಪ ಸವದಿ, ಶಂಕರ ವಾಘಮೋಡೆ ಇತರರಿದ್ದರು.
ಅಥಣಿ: ವೈಜ್ಞಾನಿಕ ಕೃಷಿ ಪದ್ಧತಿಯಿಂದ ಕಬ್ಬು ಇಳುವರಿ ಹೆಚ್ಚಿಸಲು ಸಾಧ್ಯ. ರೈತರು ಸಾಂಪ್ರದಾಯಿಕ ಕೃಷಿಗೆ ಅಂಟಿಕೊಳ್ಳದೆ ವೈಜ್ಞಾನಿಕ ಪದ್ದತಿ ಅಳವಡಿಸಿಕೊಂಡಾಗ ಮಾತ್ರ ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಇಲ್ಲಿನ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ರೈತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಬ್ಬಿನ ಬೆಳೆ ವಿಚಾರ ಸಂಕಿರಣದಲ್ಲಿ ಮಾತನಾಡಿ, ಕಬ್ಬು ಬೆಳೆಗಾರರ ಏಳಿಗೆಗಾಗಿ ಕಾರ್ಖಾನೆ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಕೃಷ್ಣಾ ಕಾರ್ಖಾನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿತ್ಯ 6,500ರಿಂದ 7,000 ಟನ್ ಕಬ್ಬು ನುರಿಸುತ್ತಿದೆ. ತೂಕದಲ್ಲಿ ಪಾರದರ್ಶಕ ಇರುವುದರಿಂದ ರೈತರಿಗೆ ಪ್ರತಿ ಎಕರೆಗೆ ಅಂದಾಜು 35 ಸಾವಿರ ರೂ. ಹೆಚ್ಚುವರಿ ಉಳಿತಾಯವಾಗುತ್ತಿದೆ. ಸಕಾಲಕ್ಕೆ ಬಿಲ್ ಪಾವತಿಸಲು ಬದ್ಧನಾಗಿದ್ದೇನೆ ಎಂದರು. ಕಬ್ಬು ತಜ್ಞ ಸುನೀಲಕುಮಾರ ನೂಲಿ ಮಾತನಾಡಿ, ಅಲ್ಪಾವಧಿ, ಮಧ್ಯಮಾವಧಿ ಹಾಗೂ ಹೂ ಬಿಡದ ಕಬ್ಬಿನ ತಳಿಗಳನ್ನು ಆಯ್ಕೆ ಮಾಡಿ ಸಾಲುಗಳ ನಡುವೆ ಅಗಲ ಅಂತರ ಕಾಯ್ದುಕೊಳ್ಳುವುದರಿಂದ ಗಾಳಿ-ಬಿಸಿಲು ಸರಿಯಾಗಿ ಸಿಗುತ್ತದೆ ಎಂದು ಹೇಳಿದರು.
ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಉಪಾಧ್ಯಕ್ಷ ಶಂಕರ ವಾಘಮೋಡೆ, ಕೃಷಿ ಅಧಿಕಾರಿ ನಿಂಗಣ್ಣ ಬಿರಾದಾರ, ನಿರ್ದೇಶಕರಾದ ಮಲ್ಲಿಕಾರ್ಜುನ ಗೋಟಖಿಂಡಿ, ರಮೇಶ ಪಟ್ಟಣ, ಜಿ.ಎಂ.ಜತ್ತಿ, ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ, ಕೃಷಿ ತಜ್ಞರಾದ ಶಿವಶಂಕರ ಮೂರ್ತಿ, ಎಸ್.ಎಸ್. ನೂಲಿ, ಮಂಜುನಾಥ ಜೋಡರೆಟ್ಟಿ, ಎಸ್.ವಿ.ಕೊಳೇಕರ, ಮಂಜುನಾಥ ಕಲ್ಲೊಳಿ ಇತರರಿದ್ದರು.