ಬೆಳಗಾವಿಯಲ್ಲಿ ಶನಿವಾರ ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆಸೀಫ್ ಸೇಠ್, ಲಕ್ಷ್ಮಣರಾವ್ ಚಿಂಗಳೆ, ವಿನಯ ನಾವಲಗಟ್ಟಿ, ಮೃಣಾಲ ಹೆಬ್ಬಾಳ್ಕರ್ ಇತರರಿದ್ದಾರೆ.
ಬೆಳಗಾವಿ: ಮನರೇಗಾ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಈ ಹಿಂದೆ ಮೂರು ಕೃಷಿ ಕಾಯಿದೆಗಳ ವಿರುದ್ಧ ನಡೆಸಲಾಗಿದ್ದ ಹೋರಾಟದ ಮಾದರಿಯಲ್ಲೇ ತಿಂಗಳಪೂರ್ತಿ ವಿವಿಧ ಹಂತಗಳಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ ಕಳವು ಬಗ್ಗೆ ಪ್ರಶ್ನೆ ಎತ್ತಿದ ನಂತರ ದೇಶಾದ್ಯಂತ ಆಂದೋಲನದ ಸ್ವರೂಪ ಪಡೆದುಕೊಳ್ಳುತ್ತಿತ್ತು. ಇದನ್ನು ಡೈವರ್ಟ್ ಮಾಡುವುದಕ್ಕಾಗಿಯೆ ಜನರ ಮನಸ್ಸಿನಲ್ಲಿ ಬೇರೆ ವಿಷಯ ಹಾಕುವ ದುರುದ್ದೇಶದಿಂದ ಮನರೇಗಾದಿಂದ ಮಹಾತ್ಮ ಗಾಂಧೀಜಿ ಹೆಸರು ತೆಗೆದಿದ್ದಾರೆ. ಅನೇಕ ಬದಲಾವಣೆ ಮಾಡಿ, ನೂನ್ಯತೆಗಳಿದ್ದವೆಂಬ ನೆಪ ಹೇಳಿದ್ದಾರೆ. ಹತ್ತು ವರ್ಷಗಳಲ್ಲಿ ಇವರೇ ಅಧಿಕಾರದಲ್ಲಿದ್ದು. ಆಗ ಕಾರಣ ನೂನ್ಯತೆಗಳು ಈಗ ಏಕಾಏಕಿಯಾಗಿ ಕಂಡಿದ್ದೆ ಅಚ್ಚರಿಯಾಗಿದೆ. ಜನರ ದಿಕ್ಕು ತಪ್ಪಿಸುವುದು ಬಿಟ್ಟು ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಆರೋಪಿಸಿದರು.
ಜ.11ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ, ಜ.12ರಿಂದ 29ರವರೆಗೆ ಗ್ರಾಪಂ ಮಟ್ಟದಲ್ಲಿ ಜನಸಂಪರ್ಕ ಸಮಾವೇಶ, ಜ.30ರಂದು ಗ್ರಾಪಂ ವಾರ್ಡ್ ಮತ್ತು ಪಕ್ಷದ ಬ್ಲಾಕ್ ಮಟ್ಟದಲ್ಲಿ ಶಾಂತಿಯುತ ಧರಣಿ, ಜ.31ರಿಂದ ಫೆ.6ರವರೆಗೆ ಜಿಲ್ಲಾಮಟ್ಟದಲ್ಲಿ ಮನರೇಗಾ ಬಚಾವೋ ಧರಣಿ, ಫೆ.7ರಿಂದ 15ರವರೆಗೆ ರಾಜ್ಯಮಟ್ಟದಲ್ಲಿ ಬಿಜೆಪಿ ಸರ್ಕಾರ ಇರುವಲ್ಲಿ ವಿಧಾನಸೌಧಗಳಿಗೆ ಹಾಗೂ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಸರ್ಕಾರವಿರುವ ರಾಜ್ಯದಲ್ಲಿ ಬಿಜೆಪಿ ರಾಜ್ಯ ಕಚೇರಿ ಇಲ್ಲವೇ ಕೇಂದ್ರ ಸರ್ಕಾರದ ಪ್ರಮುಖ ಕಚೇರಿಗಳಿಗೆ ಮುತ್ತಿಗೆ ಹಾಕುವುದು, ಫೆ.16ರಿಂದ 25ರವರೆಗೆ ಆಯಾ ರಾಜ್ಯದಲ್ಲಿ ವಿಭಾಗವಾರು ಪ್ರತಿಭಟನಾ ರ‌್ಯಾಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಫೆ25ರವರೆಗೆ ನಿರಂತರವಾಗಿ ನಮ್ಮ ಹೋರಾಟ ನಡೆಯುತ್ತಿರುತ್ತದೆ. ಈ ಮಧ್ಯೆ ಬಿಜೆಪಿ ಸರ್ಕಾರ ತಿದ್ದುಪಡಿ ವಾಪಸ್ಸು ಪಡೆದುಕೊಂಡು ಹಳೇ ಹೆಸರನ್ನೇ ಮುಂದುವರಿಸುತ್ತಾ ಕಾದು ನೋಡುತ್ತೇವೆ. ಇಲ್ಲದೇ ಹೋದಲ್ಲಿ ಫೆ.25ರ ಬಳಿಕ ದೆಹಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳುತ್ತೇವೆ. ಈ ಹಿಂದೆ ಮೂರು ಕೃಷಿ ಕಾಯಿದೆಗಳ ವಿರುದ್ಧ ಮಾಡಿದ್ದ ಹೋರಾಟದ ಮಾದರಿಯಲ್ಲೇ ಈ ಸಮಾವೇಶ ಇರುತ್ತದೆ ಎಂದು ಮಾಹಿತಿ ನೀಡಿದರು.
ಶಾಸಕ ಆಸೀಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಮೃಣಾಲ ಹೆಬ್ಬಾಳ್ಕರ್, ವಾಕರಸಾ ಸಂಸ್ಥೆ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಧಾಕರ ಬಡಿಗೇರ, ಕಾಡಾ ಅಧ್ಯಕ್ಷ ಯುವರಾಜ ಕದಂ ಇತರರಿದ್ದರು.