ಚಿಂಚಣಿ ಗ್ರಾಮದಲ್ಲಿ ನಡೆಯುತ್ತಿರುವ ಮಹಾ ದಾಸೋಹ ಜಾತ್ರೆಯಲ್ಲಿ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಅವರನ್ನು ಶ್ರೀಗಳು ಸನ್ಮಾನಿಸಿದರು. ಶಿವಕುಮಾರ ಸ್ವಾಮೀಜಿ, ಸಂಗನಬಸವ ಸ್ವಾಮೀಜಿ, ಶಿವಲಿಂಗೇಶ್ವರ ಸ್ವಾಮೀಜಿ, ಪಿ.ರಾಜೀವ, ಸತೀಶ ಅಪ್ಪಾಜಿಗೋಳ ಇತರರಿದ್ದರು.
ಮಾಂಜರಿ: ಭಾರತೀಯ ಸಂಸ್ಕೃತಿ, ಪರಂಪರೆ, ಸೌಹಾರ್ದ ಮತ್ತು ಕುಟುಂಬ ಜೀವನವನ್ನು ಮರುಸ್ಥಾಪಿಸಲು ಮಠ-ಮಾನ್ಯಗಳಿಂದ ಸಾಧ್ಯ ಎಂದು ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದಲ್ಲಿ ಬುಧವಾರ ಚಿಂಚಣಿ ಸಿದ್ಧಸಂಸ್ಥಾನ ಮಠದ ದಾಸೋಹ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಬಸವ ಪುರಾಣ ಸಮಾರಂಭದಲ್ಲಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಪರಂಪರೆಯ ಮಠಗಳು ಸಾಮಾಜಿಕ, ದಾಸೋಹ, ಶೈಕ್ಷಣಿಕ ಕಾರ್ಯದ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿವೆ ಎಂದು ಪ್ರಶಂಸಿಸಿದರು.
ಚಿಂಚಣಿ ಮಠ ಗಡಿಭಾಗದಲ್ಲಿ ಕನ್ನಡ ಉಳಿಸುವ ಕಾಯಕ ಮಾಡಿದೆ. ಕನ್ನಡಕ್ಕಾಗಿ ದುಡಿದ ಲಿಂಗೈಕ್ಯ ಅಲ್ಲಮಪ್ರಭು ಸ್ವಾಮೀಜಿ, ಕಾಯಕಯೋಗಿ ಸಿದ್ಧಪ್ರಭು ಸ್ವಾಮೀಜಿ ಪ್ರಾತಃಸ್ಮರಣೀಯರು. ಪ್ರಸ್ತುತ ಪೂಜ್ಯರು ಕೂಡ ಅದೇ ಪರಂಪರೆ ಮುಂದುವರಿಸಲಿ. ಮಠದ ಪರಂಪರೆ ಅತ್ಯಂತ ಪವಿತ್ರವಾಗಿದ್ದು, ಗಡಿಭಾಗದ ಶ್ರದ್ಧಾಕೇಂದ್ರವಾಗಿದೆ ಎಂದರು.
ಮಾಜಿ ಶಾಸಕ ಪಿ.ರಾಜೀವ ಮಾತನಾಡಿ, ಈ ಹಿಂದೆ ಗ್ರಾಮೀಣರ ಬದುಕು ಯಾವುದೇ ಮೂಲಸೌಕರ್ಯ ಇಲ್ಲದೆಯೂ ಸುಂದರವಾಗಿತ್ತು. ಆಡಂಬರದ ಜೀವನ, ಎಲ್ಲ ಸೌಕರ್ಯ ಇರುವ ಇಂದಿನ ದಿನಮಾನಗಳಲ್ಲಿ ಗ್ರಾಮಗಳಲ್ಲಿ ಒಂದೇ ಧ್ವನಿಯಿಂದ ತೀರ್ಮಾನ ತೆಗೆದುಕೊಳ್ಳಲಾಗದ ಪರಿಸ್ಥಿತಿ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾಜದಲ್ಲಿನ ಲೋಪ-ದೋಷಗಳನ್ನು ಸರಿಪಡಿಸುವ ಮತ್ತು ಸಂಸ್ಕೃತಿ, ಸಂಸ್ಕಾರ, ಪರಂಪರೆಗಳನ್ನು ಮರುಸ್ಥಾಪಿಸಲು ಜನಪ್ರತಿನಿಧಿಗಳಿಂದ ಅಸಾಧ್ಯ. ಈ ಕೆಲಸ ಮಠ-ಮಾನ್ಯಗಳಿಂದ ಮಾತ್ರ ಸಾಧ್ಯ. ಮಠಾಧೀಶರು ಈ ದಿಕ್ಕಿನತ್ತ ಆಲೋಚಿಸಿ, ಸಾಮಾಜಿಕ ಪರಿವರ್ತನಿಯ ಕೆಲಸದಲ್ಲಿ ತೊಡಗಬೇಕು. ಅನ್ನ, ಅಕ್ಷರ, ಅಧ್ಯಾತ್ಮ ದಾಸೋಹಗಳ ಮೂಲಕ ದೇಶಾದ್ಯಂತ ಮಠ-ಮಾನ್ಯಗಳು ಭಾರತೀಯ ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ, ಬೆಳೆಸಿವೆ. ಲಕ್ಷಾಂತರ ಸತ್ಪ್ರಜೆಗಳನ್ನು ರೂಪಿಸಿವೆ ಎಂದು ಹೇಳಿದರು.
ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು. ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಲಿಂಗೇಶ್ವರ ಸ್ವಾಮೀಜಿ, ಚಿಂಚಣಿ ಶಿವಕುಮಾರ ಸ್ವಾಮೀಜಿ, ಸತೀಶ ಅಪ್ಪಾಜಿಗೋಳ, ಶರತ್‌ಚಂದ್ರ ಕವಟಗಿಮಠ,ರಾಕೇಶ ಚಿಂಚನೆ ಇತರರಿದ್ದರು.