ಬೆಳಗಾವಿ ಜಿಲ್ಲೆಯಲ್ಲಿರುವ 60 ಎಐ ಕ್ಯಾಮರಾಗಳನ್ನು ನಿರ್ವಹಿಸುವ ಕಂಟ್ರೋಲ್ ರೂಮ್. 
ಬೆಳಗಾವಿ

ರಾಜ್ಯಕ್ಕೆ ಮಾದರಿ ಕ್ಯಾಮರಾ ಕಣ್ಗಾವಲು!

ಡಿ.ವಿ. ಕಮ್ಮಾರ
ಡಿ.ವಿ.ಕಮ್ಮಾರ ಬೆಳಗಾವಿ
ಸಂಚಾರ ನಿಯಮ ಉಲ್ಲಂಘನೆ ಮೇಲೆ ನಿಗಾ ಇಡಲು ಬೆಳಗಾವಿ ಜಿಲ್ಲಾ ಪೊಲೀಸರು ಕೈಗೊಂಡಿದ್ದ ಎಐ ಕ್ಯಾಮರಾ ಕಣ್ಗಾವಲಿಗೆ ಪ್ರಾಯೋಗಿಕ ಹಂತದಲ್ಲೇ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಒಂದೇ ತಿಂಗಳಲ್ಲಿ ನಿಯಮ ಉಲ್ಲಂಘಿಸಿದ ಒಟ್ಟು 2,33,892 ಪ್ರಕರಣ ಪತ್ತೆಯಾಗಿದ್ದು, ಒಟ್ಟು 5.01 ಕೋಟಿ ರೂ. ದಾಖಲೆ ಪ್ರಮಾಣದ ದಂಡ ವಿಧಿಸಲಾಗಿದೆ. ಈ ಮೂಲಕ ಇಡೀ ರಾಜ್ಯಕ್ಕೆ ಎಐ ಕ್ಯಾಮರಾ ಕಣ್ಗಾವಲು ತಂತ್ರ ಮಾದರಿಯಾಗಿದೆ. ಬೇರೆ ಜಿಲ್ಲೆಗಳಲ್ಲೂ ಇಲ್ಲಿನ ತಂತ್ರವನ್ನೇ ಜಾರಿಗೆ ತರಲು ಚಿಂತನೆ ನಡೆದಿದೆ.
ಬೆಳಗಾವಿ ನಗರ ಪೊಲೀಸ್ ಕಮೀಷ್ನರೇಟ್ ವ್ಯಾಪ್ತಿ ಹೊರತುಪಡಿಸಿ ತಾಲೂಕು, ಹೋಬಳಿ ಕೇಂದ್ರದ ಪ್ರಮುಖ ರಸ್ತೆ, ವೃತ್ತಗಳಲ್ಲಿ 66 ಕ್ಯಾಮರಾ ಅಳವಡಿಸಲಾಗಿದೆ. ಇವುಗಳಿಂದ ದಿನವೊಂದಕ್ಕೆ ಸರಾಸರಿ 5,600ರಷ್ಟು ಪ್ರಕರಣ ಪತ್ತೆಯಾಗುತ್ತಿವೆ. ಜೂ.4ರಿಂದ ಜು.15ರವರೆಗೆ 1,75,601 ಹೆಲ್ಮೆಟ್ ರಹಿತ ಪ್ರಯಾಣ, 46,011 ಸೀಟ್ ಬೆಲ್ಟ್ ರಹಿತ, 8,323 ಅಪ್ರಾಪ್ತರ ಚಾಲನೆ , 3,301 ತ್ರಿಬಲ್ ರೈಡ್, 353 ರಾಂಗ್ ಸೈಡ್, 290 ಮೊಬೈಲ್ ಬಳಕೆ, 10 ಸರಕು ಸಾಗಣೆ ನಿಯಮ ಉಲ್ಲಂಘನೆ, 3 ಇತರ ಪ್ರಕರಣಗಳಿವೆ.
ಈ ವಾರದಲ್ಲಿ ಹೊಸದಾಗಿ 60 ಕ್ಯಾಮರಾ ಅಳವಡಿಸಲಿದ್ದು, ಒಟ್ಟು ಕ್ಯಾಮರಾಗಳ ಸಂಖ್ಯೆ 126ಕ್ಕೆ ಏರಿಕೆಯಾಗಲಿದೆ. ಇದರಿಂದ ಪ್ರಕರಣಗಳ ಸಂಖ್ಯೆಯೂ ಹೆಚ್ಚುವ ಸಾಧ್ಯತೆಯಿದೆ. ಜತೆಗೆ ಮತ್ತೆ ನೂರು ಕ್ಯಾಮರಾಗಳಿಗೆ ಟೆಂಡರ್ ಕರೆಯಲಾಗುತ್ತಿದೆ. ಇದೂ ಪೂರ್ಣಗೊಂಡಲ್ಲಿ ಜಿಲ್ಲಾದ್ಯಂತ ಒಟ್ಟು 226 ಎಐ ಕ್ಯಾಮರಾ ಕಣ್ಗಾವಲು ಇರಲಿದೆ.
ರಾಜ್ಯದಲ್ಲಿ ನಾಲ್ಕೈದು ಜಿಲ್ಲೆಗಳಲ್ಲಿ ಮಾತ್ರ ಹೀಗೆ ಗ್ರಾಮೀಣ ಭಾಗದಲ್ಲೂ ಎಐ ಆಧಾರಿತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಬೆಳಗಾವಿಯಲ್ಲಿ ನಿರೀಕ್ಷೆ ಮೀರಿ ಯಶಸ್ಸು ಸಿಕ್ಕಿದೆ. ಹೀಗಾಗಿ, ಇಲ್ಲಿನ ಪೊಲೀಸರು ಅಳವಡಿಸಿರುವ ತಂತ್ರ, ಇದಕ್ಕಾಗಿ ರಸ್ತೆ ಮತ್ತು ವೃತ್ತಗಳನ್ನು ಗುರುತಿಸಿದ ಮಾದರಿಯನ್ನೇ ಉಳಿದ ಜಿಲ್ಲೆಗಳಿಗೂ ಅಳವಡಿಸಲು ಚಿಂತನೆ ನಡೆದಿದೆ.

ಬೈಕ್‌ಗಳದ್ದೇ ಸಿಂಹಪಾಲು ಒಂದು ತಿಂಗಳಲ್ಲಿನ 5,01,71,500 ರೂ. ದಂಡದಲ್ಲಿ ಹೆಲ್ಮೆಟ್ ರಹಿತ ಚಾಲನೆಗೆ ಒಟ್ಟು 3,40,12,500 ರೂ. ದಂಡ ವಿಧಿಸಲಾಗಿದೆ. ಒಟ್ಟಾರೆ ಪ್ರಕರಣಗಳಲ್ಲಿ ಇದುವೇ ಸಿಂಹಪಾಲು ಪಡೆದಿದೆ. ಉಳಿದಂತೆ ಸೀಟ್ ಬೆಲ್ಟ್ ರಹಿತರಿಗೆ 1.52 ಕೋಟಿ, ತ್ರಿಬಲ್ ರೈಡ್ 7.25 ಲಕ್ಷ, ಮೊಬೈಲ್ ಬಳಕೆಗೆ 1.57 ಲಕ್ಷ ರೂ. ದಂಡ ವಿಧಿಸಲಾಗಿದೆ. ಈವರೆಗೆ ಕೇವಲ 1.89 ಲಕ್ಷ ರೂ. ಪಾವತಿಯಾಗಿದೆ.

"

ಜನರಿಂದ ದಂಡ ವಸೂಲಿ ಮಾಡುವುದೇ ನಮ್ಮ ಉದ್ದೇಶವಲ್ಲ. ಕ್ಯಾಮರಾ ನೋಡುತ್ತಿದೆ. ದಂಡದ ನೋಟಿಸ್ ಮನೆಗೆ ಬರುತ್ತದೆಂಬ ಭಯಕ್ಕಾದರೂ ಜನ ಜಾಗೃತರಾಗಬೇಕಿದೆ. ಆಘಾತಗಳಿಂದಾಗುವ ಸಾವಿನ ಪ್ರಮಾಣ ಕಡಿಮೆ ಮಾಡಲು ಸಂಚಾರ ನಿಯಮ ಪಾಲಿಸಬೇಕು.

— ಕೆ.ರಾಮರಾಜನ್ ಎಸ್ಪಿ