ಬೆಳಗಾವಿಯಲ್ಲಿ ಭಾನುವಾರ ಸಂಸದ ಜಗದೀಶ ಶೆಟ್ಟರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸುಭಾಷ ಪಾಟೀಲ, ಗೀತಾ ಸುತಾರ, ಹನಮಂತ ಕೊಂಗಾಲಿ, ಸಂತೋಷ ದೇಶನೂರ ಇದ್ದಾರೆ.
ಬೆಳಗಾವಿ : ಶಾಸಕ ಚಂದ್ರು ಲಮಾಣಿ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಆದರೆ, ಸರ್ಕಾರದ ಮೇಲಿರುವ ಗುತ್ತಿಗೆದಾರರ 37 ಸಾವಿರ ಕೋಟಿ ರೂ. ಬಾಕಿ ಬಿಲ್ ಹಾಗೂ ಕಮೀಷನ್ ಹಗರಣದ ಬಗ್ಗೆ ಜನ ಮಾತನಾಡಿಕೊಳ್ಳುತ್ತಿರುವ ಹಾದಿ ತಪ್ಪಿಸಲು ಈ ದಾಳಿ ನಡೆಸಿದಂತಿದ್ದು, ಇದರಲ್ಲಿ ಲಮಾಣಿ ಬಲಿಪಶುವಾಗಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಆಗಿರುವುದರಲ್ಲಿ ತಪ್ಪು ಸರಿ ಎಂಬ ಸರ್ಟಿಫಿಕೇಟ್ ಕೊಡುವುದಿಲ್ಲ. ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಏನು ಆಗಬೇಕೋ ಆಗುತ್ತದೆ. ಆದರೆ ಈ ಹಿಂದೆ ಶಾಸಕ ಸಂಪಂಗಿ ಅವರ ಮೇಲೂ ಹೀಗೆಯೇ ದಾಳಿಯಾಗಿತ್ತು. ಈಗ ಲಮಾಣಿ ಮೇಲೆ ಆಗಿದೆ. ಲೋಕಾಯುಕ್ತ ದಾಳಿಗಳಲ್ಲಿ ದಲಿತ ಸಮುದಾಯದ ಶಾಸಕರನ್ನೇ ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಆದರೆ ಲೋಕಾಯುಕ್ತ ದಾಳಿಗಳ ಬಗ್ಗೆ ಜನರಲ್ಲಿ ಹೆದರಿಕೆ ಬೇಕಿದೆ. ಇದು ಲೋಕಾಯುಕ್ತ ದಾಳಿಗಳಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಎಂಬುದರ ಮೇಲೂ ಗಮನಿಸಬೇಕಾಗುತ್ತದೆ. ಲೋಕಾಯುಕ್ತ ಮುಖ್ಯಸ್ಥರು ಕಳೆದ 10 ವರ್ಷಗಳಲ್ಲಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಮೇಲಿನ ದಾಳಿಯ ಮಾಹಿತಿ ಬಹಿರಂಗಪಡಿಸಲಿ. ಎಷ್ಟು ಜನರಿಗೆ ಎಷ್ಟು ಶಿಕ್ಷೆಯಾಗಿದೆ ಎನ್ನುವುದನ್ನು ಹೇಳಲಿ. ವಿಚಾರಣೆ ಹಂತದಲ್ಲಿರುವ ಮಾಹಿತಿಯನ್ನಾದರೂ ಕೊಡಲಿ ಎಂದರು.
ಅರ್ಕಾವತಿ ಯೋಜನೆ ಬಗ್ಗೆ ಕೆಂಪಣ್ಣ ಆಯೋಗದ ವರದಿ ನೀಡಿದ್ದು, ಅದನ್ನು ಸಿದ್ದರಾಮಯ್ಯ ವಿಧಾನ ಮಂಡಳದ ಮುಂದಿಡಬೇಕು. ರಾಜಣ್ಣ ಇಲ್ಲಿ ಯಾರು ಸತ್ಯ ಹರಿಶ್ಚಂದ್ರರಿದ್ದಾರೆ? ಎಂದು ಕೇಳಿದ್ದಾರೆ. ಸತೀಶ ಜಾರಕಿಹೊಳಿ ಕಮೀಷನ್ ವ್ಯವಸ್ಥೆ ಬಗ್ಗೆಯೂ ಮಾತನಾಡಿದ್ದಾರೆ. ಹೀಗಾಗಿ ಸರ್ಕಾರದಲ್ಲಿ ಕಮೀಷನ್ ವ್ಯವಸ್ಥೆ ಯುನಿವರ್ಸಲ್ ಆಗಿ ಹೊಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಒಂದು ಜಾತಿಗೆ ಸೀಮಿತವಾಗಬಾರದು. ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕುರುಬ ಸಮುದಾಯದ ಕಾರ್ಡ್ ಬಳಸುತ್ತಿದ್ದಾರೆ. ಇದು ಅವರ ಸ್ಥಾನಕ್ಕೆ ಗೌರವ ತರುವಂಥಹುದಲ್ಲ. ಡಿಕೆಶಿ ಅವರೊಂದಿಗಿನ ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಒಪ್ಪಂದದ ಒತ್ತಡದಿಂದ ಪಾರಾಗಲು ಈ ರೀತಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಜಾತಿ ಮೀರಿದ ನಾಯಕರಾಗಬೇಕಿದೆ ಶೆಟ್ಟರ ಸಲಹೆ ನೀಡಿದರು.