ಬೆಳಗಾವಿ ಸುವರ್ಣ ವಿಧಾನಸೌಧ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಸತೀಶ ಜಾರಕಿಹೊಳಿ ಮಾತನಾಡಿದರು. ಮೊಹಮ್ಮದ ರೋಷನ್, ರಾಹುಲ ಶಿಂಧೆ ಇತರರಿದ್ದರು. 
ಬೆಳಗಾವಿ

ಪಾಲಿಕೆಯಲ್ಲಿ ಅನುದಾನ ದುರ್ಬಳಕೆ ಸಹಿಸಲ್ಲ

ಬೆಳಗಾವಿ: ಮಹಾನಗರ ಪಾಲಿಕೆ ಆಡಳಿತ ಮಂಡಳಿಯು ನಗರದಲ್ಲಿ ರಸ್ತೆ ಗುಂಡಿ ಮುಚ್ಚುವುದು, ದುರಸ್ತಿ ಸೇರಿ ತುರ್ತು ಕಾಮಗಾರಿಗಳಿಗೆ ಆದ್ಯತೆ ನೀಡಬೇಕೇ ಹೊರತು, ಅನುದಾನವನ್ನು ವಾರ್ಡ್‌ಗಳಿಗೆ ಹಂಚಿಕೆ ಮಾಡುವ ರೀತಿಯಲ್ಲಿ ಬಳಕೆ ಮಾಡಬಾರದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.
ಸುವರ್ಣ ವಿಧಾನಸೌಧದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ. ವಿವಿಧ ಕಾಮಗಾರಿಗಳಿಗೆ ಅನುದಾನ ಬಳಕೆ ಮಾಡುವಾಗ ಸ್ಥಳೀಯ ಶಾಸಕರ ಗಮನಕ್ಕೆ ತಂದು, ಅವರೊಂದಿಗೆ ಸಮನ್ವಯ ಸಾಧಿಸಿಯೇ ಕಾಮಗಾರಿಗಳನ್ನು ಕೈಗೊಳ್ಳಬೇಕು. ಸರ್ಕಾರದ ಅನುದಾನ ಬಳಕೆ ಮಾಡುವ ಕುರಿತು ಸಚಿವರ, ಶಾಸಕರ ಗಮನಕ್ಕೆ ತರಬೇಕು. ಉತ್ತರ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರ ಗಮನಕ್ಕೆ ತರದೆ ಕಾಮಗಾರಿ ಏಕೆ ಕೈಗೊಳ್ಳುತ್ತೀರಿ? ಎಂದು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ, ತುರ್ತು ಅವಶ್ಯಕತೆ ಇರುವ ರಸ್ತೆಗಳಿಗೆ ಮೊದಲ ಆದ್ಯತೆ ನೀಡಬೇಕು. ಗುಂಡಿ ಮುಚ್ಚುವಿಕೆ ಹಾಗೂ ರಸ್ತೆ ದುರಸ್ತಿ ಕಾಮಗಾರಿ ತ್ವರಿತವಾಗಿ ಕೈಗೊಳ್ಳಬೇಕು. ಆದರೆ, ರಸ್ತೆ ದುರಸ್ತಿ ಹೆಸರಿನಲ್ಲಿ ಅನುದಾನವನ್ನು ವಾರ್ಡ್‌ವಾರು ಹಂಚಿಕೆ ಮಾಡುವ ಕ್ರಮ ಸರಿಯಲ್ಲ.ಎಲ್ಲೆಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ, ಯಾವ ಕಾಮಗಾರಿಗೆ ಎಷ್ಟು ಅನುದಾನ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಬೇಕು. ಆಡಳಿತ ಮಂಡಳಿ ಪರಿಷತ ಸಭೆಯ ಹೆಸರಿನಲ್ಲಿ ಬೇಕಾಬಿಟ್ಟಿಯಾಗಿ ಅನುದಾನ ಬಳಕೆ ಮಾಡುವಂತಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಎಸ್‌ಸಿಪಿ-ಟಿಎಸ್‌ಪಿ ಅನುದಾನದ ಬಳಕೆಯಲ್ಲಿಯೂ ಅಧಿಕಾರಿಗಳು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಈ ಅನುದಾನವನ್ನು ಯಾವ ಕಾಮಗಾರಿಗಳಿಗೆ ಬಳಸಲಾಗುತ್ತಿದೆ ಎಂಬುದನ್ನು ಶಾಸಕರ ಗಮನಕ್ಕೆ ತರಬೇಕು. ಅಧಿಕಾರಿಗಳು ತಮ್ಮಷ್ಟಕ್ಕೆ ತಾವೇ ನಿರ್ಧರಿಸಿ ಅನುದಾನ ಬಳಕೆ ಮಾಡಬಾರದು ಎಂದರು.
ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಮಾತನಾಡಿ, ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಈಗಾಗಲೇ 56 ಲಕ್ಷ ರೂ. ಅನುದಾನ ಖರ್ಚು ಮಾಡಲಾಗಿದೆ. ಉಳಿದಿರುವ 11 ಲಕ್ಷ ರೂ.ಅನುದಾನಕ್ಕೂ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
............
ಬಾಕ್ಸ್
ಸ್ಮಾರ್ಟ್ ಸಿಟಿ ಕಾಮಗಾರಿಗಳ ನಿರ್ವಹಣೆ ಯಾರ ಹೊಣೆ?
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ವಿವಿಧ ಕಾಮಗಾರಿಗಳ ನಿರ್ವಹಣೆ ಹಾಗೂ ಮುಂದಿನ ದಿನಗಳಲ್ಲಿ ಅವುಗಳ ಜವಾಬ್ದಾರಿ ಯಾರದ್ದು ಎಂಬುದನ್ನು ಸ್ಪಷ್ಟಪಡಿಸಬೇಕು. ಏಕೆಂದರೆ, ಸ್ಮಾರ್ಟ್ ಸಿಟಿ ಯೋಜನೆ ಅಕ್ಟೋಬರ್‌ನಿಂದ ಬಂದ ಆಗಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿರ್ಮಿಸಿರುವ ಆಸ್ತಿಗಳು ಮತ್ತು ಕಾಮಗಾರಿಗಳ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಅಗತ್ಯವಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟರೆ ಅನುಕೂಲವಾಗಲಿದೆ.
ಈಗಾಗಲೇ ಆರೋಗ್ಯ ಇಲಾಖೆ ಆವರಣದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆ ಹಿಂದೆಯೇ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೂ ಯಾವುದೇ ಅನುಮತಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡಲಾಗಿದೆ.ಅನುಮತಿ ಇಲ್ಲದೆ ಕಟ್ಟಡ ನಿರ್ಮಾಣವಾಗಿರುವುದು ಹೇಗೆ? ಎಂಬ ಪ್ರಶ್ನೆ ಸಭೆಯಲ್ಲಿ ಎದುರಾಯಿತು. ಸರ್ಕಾರದ ವ್ಯವಸ್ಥೆಯಲ್ಲೇ ತಪ್ಪು ನಡೆದಿದ್ದು, ಈ ವಿಚಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.ಆರೋಗ್ಯ ಇಲಾಖೆಗೆ ಸೇರಿದ ಜಾಗವನ್ನು ಹಸ್ತಾಂತರಿಸುವ ವಿಚಾರದಲ್ಲಿಯೂ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆಯ ಆವರಣವನ್ನು ಹಸ್ತಾಂತರಿಸುವ ಮೊದಲು ಅದರ ಅಗತ್ಯತೆ, ನಿರ್ವಹಣೆ ಹಾಗೂ ಹಣಕಾಸಿನ ವ್ಯವಸ್ಥೆ ಕುರಿತು ಸ್ಪಷ್ಟತೆ ಇರಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.
..............