ಈಚೆಗೆ ನಗರದಲ್ಲಿ ಕಂಡು ಬಂದಿದ್ದ ಅಪ್ರಾಪ್ತರ ಬೈಕ್ ಸವಾರಿ. ಈ ವಿಡಿಯೋ ನೋಡಿ ದಂಡದ ನೋಟಿಸ್ ನೀಡಲಾಗಿದೆ.  
ಬೆಳಗಾವಿ

ಅಪ್ರಾಪ್ತರ ಬೈಕ್ ರೈಡ್‌ಗಿಲ್ಲ ಲಗಾಮು

ಡಿ.ವಿ. ಕಮ್ಮಾರ
ಡಿ.ವಿ.ಕಮ್ಮಾರ ಬೆಳಗಾವಿ
ಈಚೆಗೆ ರಾಜ್ಯದ ಹಲವು ಸಣ್ಣಪುಟ್ಟ ನಗರಗಳಲ್ಲೂ ಅಪ್ರಾಪ್ತರಿಗೆ ಬೈಕ್ ಕೊಟ್ಟ ಪಾಲಕರಿಗೆ ದಂಡ ವಿಧಿಸುವ ಪಕ್ರಿಯೆ ಜೋರಾಗಿ ನಡೆದಿದೆ. ಆದರೆ ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಮಾತ್ರ ಅಪ್ರಾಪ್ತರ ಬೈಕ್ ರೈಡ್‌ಗೆ ಲಗಾಮು ಇಲ್ಲದಂತಾಗಿದೆ. ಸಾಕಷ್ಟು ಕಡೆ ಅಪ್ರಾಪ್ತರು ಸಂಚಾರ ಪೊಲೀಸರ ಕಣ್ಮುಂದೆಯೇ ಓಡಾಡುತ್ತಿದ್ದರೂ ಕ್ರಮವಹಿಸುತ್ತಿಲ್ಲ. ಇದರಿಂದ ಅಪ್ರಾಪ್ತರ ಬೈಕ್ ಸವಾರಿ ಮಿತಿಮೀರಿದೆ.
ಈಚೆಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತರ ಬೈಕ್ ಸವಾರಿಯ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆಗ ಮಾತ್ರ ಅದನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ದಂಡದ ನೋಟಿಸ್ ನೀಡುತ್ತಿದ್ದಾರೆ. ಹೆಲ್ಮೆಟ್ ಇಲ್ಲದವರು ತಪ್ಪಿಸಿಕೊಳ್ಳದಂತೆ ಹಿಡಿದು ದಂಡ ವಿಧಿಸುವ ಸಂಚಾರ ಪೊಲೀಸರಿಗೆ, ಒಬ್ಬರೂ ಅಪ್ರಾಪ್ತರು ಕಾಣ ಸಿಗುತ್ತಿಲ್ಲವೆ, ಅಥವಾ 25 ಸಾವಿರ ರೂ. ದಂಡ ವಿಧಿಸುವ ಬದಲಿಗೆ ಬೇರೆ ಏನಾದರೂ ನಡೆದಿದೆಯಾ ಎಂದು ಜನರು ಪ್ರಶ್ನಿಸುವಂತಾಗಿದೆ.

ಅಪ್ರಾಪ್ತರ ಬೈಕ್ ಸವಾರಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ತಪಾಸಣೆ ನಡೆಸಿ, ಸಂಬಂಧಿಸಿದ ಪಾಲಕರಿಗೆ ದಂಡದನೋಟಿಸ್ ನೀಡಲು ಸಿಬ್ಬಂದಿಗೆ ಸೂಚಿಸಲಾಗಿದೆ.

— ಭೂಷಣ ಬೋರಸೆ, ನಗರ ಪೊಲೀಸ್ ಆಯುಕ್ತ

ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಅಪ್ರಾಪ್ತರು ತ್ರಿಬಲ್ ರೈಡ್ ಕೂಡ ಮಾಡುತ್ತಿದ್ದಾರೆ. ಖಡೇಬಜಾರ, ಗಣಪತಿಗಲ್ಲಿ, ಮಾರುತಿಗಲ್ಲಿ, ಜೀಜಾಮಾತ ವೃತ್ತದಿಂದ ರೈಲ್ವೆ ನಿಲ್ದಾಣವರೆಗೆ, ಶಹಾಪುರದ ಎಸ್‌ಪಿಎಂ ರಸ್ತೆ ಹಾಗೂ ಒಳ ರಸ್ತೆಗಳು, ಆರ್‌ಪಿಡಿ ವೃತ್ತ, ಖಾನಾಪುರ ರಸ್ತೆ, ಅನಗೋಳ, ವಡಗಾವಿ, ಖಾಸಬಾಗ, ಟಿಳಕವಾಡಿ, ಕಣಬರ್ಗಿ, ಉದ್ಯಮಬಾಗ ರಸ್ತೆ, ಹೀಗೆ ಮುಖ್ಯ ರಸ್ತೆಗಳಲ್ಲೇ ಎಳೆ ಹುಡುಗರು ಬೈಕ್ ತೆಗೆದುಕೊಂಡು ಹೆಲ್ಮೆಟ್ ಇಲ್ಲದೇ ಓಡಾಡುತ್ತಿದ್ದರೂ ಕೇಳುವವರಿಲ್ಲದಂತಾಗಿದೆ. ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮರಾಗಳಿದ್ದರೂ ಪ್ರಯೋಜನ ಇಲದಂತಾಗಿದೆ.
ಟ್ಯೂಷನ್‌ಗೆ ದ್ವಿಚಕ್ರ ವಾಹನ
ರಜಾ ದಿನಗಳಲ್ಲಿ ಮತ್ತು ಸಂಜೆ ಹೊತ್ತಿನಲ್ಲಿ ಟ್ಯೂಷನ್ ಕ್ಲಾಸ್‌ಗಳಿಗೆ ಎಸ್ಸೆಸ್ಸೆಲ್ಸಿ ಹಾಗೂ ಅದಕ್ಕಿಂತ ಕೆಳಗಿನ ತರಗತಿ ಮಕ್ಕಳು ಬೈಕ್, ಸ್ಕೂಟರ್ ತೆಗೆದುಕೊಂಡು ಬರುತ್ತಿದ್ದಾರೆ. ಹೀಗೆ ಬಂದ ಮಕ್ಕಳು ಸುಮ್ಮನೆ ಮನೆಗಳಿಗೆ ಹೋಗುತ್ತಿಲ್ಲ. ಕೆಲವು ಕಡೆ, ಬೈಕ್ ರೇಸ್, ವೀಲಿಂಗ್ ಮಾಡುವ ದುಸ್ಸಾಹಸಕ್ಕೂ ಇಳಿಯುತ್ತಿದ್ದಾರೆ. ಕೆಲ ಮಕ್ಕಳು ತಂಡ ಕಟ್ಟಿಕೊಂಡು ರಾಜಹಂಸಗಡ ಕೋಟೆ, ಕಣಬರ್ಗಿ ಸಿದ್ಧೇಶ್ವರ ದೇವಸ್ಥಾನ, ವೈಜನಾಥ ಮಂದಿರ, ಭೂತನಾಥ ಬೆಟ್ಟಗಳಿಗೆ ಬೈಕ್ ಟ್ರಿಪ್ ಮಾಡುತ್ತಿದ್ದಾರೆ. ಇವರೊಂದಿಗೆ ಅಪ್ರಾಪ್ತೆಯರೂ ತೆರಳುತ್ತಿದ್ದು ಪಾಲಕರು ಎಚ್ಚೆತ್ತುಕೊಳ್ಳುತ್ತಿಲ್ಲ.
ದಂಡ ವಸೂಲಿ
ಎರಡು ದಿನಗಳ ಹಿಂದೆ ಆರ್‌ಪಿಡಿ ವೃತ್ತದಲ್ಲಿ ಅಪ್ರಾಪ್ತರಿಬ್ಬರು ಬೈಕ್ ತಗೆದುಕೊಂಡು ಹೊರಟಿದ್ದನ್ನು ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು, ಬೈಕ್ ಮಾಲೀಕರನ್ನು ಪತ್ತೆ ಮಾಡಿ, ಮೋಟಾರು ವಾಹನ ಕಾಯ್ದೆಯಡಿ 25,000 ರೂ. ದಂಡದ ನೋಟಿಸ್ ನೀಡಿದ್ದಾರೆ.