ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾನುವಾರ ಪೂಜೆ ಸಲ್ಲಿಸಿದರು.
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸುಮಾರು 2.50 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾನುವಾರ ಪೂಜೆ ನೆರವೇರಿಸಿದರು.
ಉಚಗಾಂವ ಗ್ರಾಮದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಬೀರದೇವರ ಸಮುದಾಯ ಭವನದ ಮೇಲ್ಚಾವಣಿ ಕಾಂಕ್ರೀಟ್ ಸ್ಲ್ಯಾಬ್ ಕಾಮಗಾರಿಗೆ ಲಕ್ಷ್ಮೀ ಹೆಬ್ಬಾಳಕರ್ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗ್ರಾಮೀಣ ಭಾಗದ ಜನರಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಭವನವು ಪ್ರಮುಖ ವೇದಿಕೆಯಾಗಲಿದ್ದು, ಕಾಮಗಾರಿ ಗುಣಮಟ್ಟದಿಂದ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಶ್ರೀ ಬೀರದೇವರ ಟ್ರಸ್ಟ್ ಸಮಿತಿಯ ಸದಸ್ಯರು, ಮಹಿಳೆಯರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ವೇಳೆ ತುರಮರಿ ಗ್ರಾಮದಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಾಗರಾಜ ಜಾಧವ್, ಚಂದ್ರಕಾಂತ ಜಾಧವ್, ಬಾಬು ಬೆಳಗಾಂವ್ಕರ್, ಸುಹಾಸ್ ಜಾಧವ್, ರಘುನಾಥ್ ಖಂಡೆಕರ್, ಜ್ಞಾನೇಶ್ವರ ಕೊರಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಸ್ತೆ ಅಭಿವೃದ್ಧಿ ಗ್ರಾಮಾಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ಅದೇ ಸರಣಿಯಲ್ಲಿ ಬಾಚಿ ಗ್ರಾಮದಲ್ಲೂ ಸುಮಾರು 72 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದೊಳಗಿನ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ವೇಳೆ ಕಾಡಾ ಅಧ್ಯಕ್ಷ ಯುವರಾಜ ಕದಂ, ಬಾಳು ದೇಸೂರಕರ್, ಮಹಾದೇವ್ ಗುಂಜಿಕರ್, ಕವಿತಾ ದೇವರಮನಿ, ಉಮಾಜಿ ಸಾವಂತ, ಲಕ್ಷ್ಮಣ ಗಾವಡೆ, ದತ್ತಾತ್ರೇಯ ದೇವರಮನಿ, ಪರಶುರಾಮ ಸಾವಂತ, ಬಾಹು ಸನದಿ, ಲಕ್ಷ್ಮಣ ಸನದಿ, ಶ್ರೀಕಾಂತ ಗುಂಜಿಕರ್ ಮುಂತಾದವರು ಉಪಸ್ಥಿತರಿದ್ದರು.
ಈ ಮೂರು ಗ್ರಾಮಗಳ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ, ಸಮುದಾಯ ಸೌಲಭ್ಯ ಮತ್ತು ಸಂಚಾರ ವ್ಯವಸ್ಥೆ ಬಲಪಡಿಸುವ ಕಾರ್ಯಕ್ಕೆ ಸರ್ಕಾರ ಬದ್ಧವಾಗಿದೆ ಎಂಬ ಸಂದೇಶ ನೀಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ನಿರಂತರವಾಗಿದ್ದು, ಕ್ಷೇತ್ರದ ಚಿತ್ರಣವೇ ಬದಲಾಗುತ್ತಿದೆ.