ಬೆಳಗಾವಿಯಲ್ಲಿ ಬುಧವಾರ ಜರುಗಿದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಮಾತನಾಡಿದರು. ಕೆ.ರಾಮರಾಜನ್, ಭೂಷಣ ಬೋರಸೆ ಇದ್ದಾರೆ.
ಬೆಳಗಾವಿ: ಮುಂದಿನ ಎರಡು ತಿಂಗಳಲ್ಲಿ ಸೂಕ್ತ ದರ ನಿಗದಿಪಡಿಸಿ ಕಡ್ಡಾಯವಾಗಿ ಆಟೋ ರಿಕ್ಷಾಗಳು ಮೀಟರ್ ಅಳವಡಿಸಿಯೇ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ನಗರದಲ್ಲಿ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ದೊರೆಯುವ ಮುಂಚೆ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ರೂಪರೇಷೆಗಳನ್ನು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಚನ್ನಮ್ಮ ವೃತ್ತ, ಕೋಟೆ ಕೆರೆ, ಅಶೋಕ ವೃತ್ತ, ನ್ಯಾಯಾಲಯ ಆವರಣ ರಸ್ತೆ, ಆರ್‌ಪಿಡಿ ವೃತ್ತ, ಶಿವಾಜಿ ಉದ್ಯಾನ ರಸ್ತೆ, ಗೋಗಟೆ ವೃತ್ತ ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಕ್ರಮ ವಹಿಸಬೇಕು. ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ಸೂಕ್ತ ಕ್ರಮ ಜರುಗಿಸಬೇಕು. ವಾಹನ ನಿಲುಗಡೆಗೆ ಅಗತ್ಯ ಸ್ಥಳಗಳಲ್ಲಿ ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸಬೇಕು. ಖಾಲಿ ಸ್ಥಳ ಗುರುತಿಸಿ ಆಯಾ ಮಾಲೀಕರಿಗೆ ವಾಹನ ಪಾಕಿರ್ಂಗ್ ವ್ಯವಸ್ಥೆ ನೀಡಲು ತಿಳಿಸಬೇಕು. ಕೋರ್ಟ್ ಕಾಂಪ್ಲೆಕ್ಸ್, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ನೋಂದಣಾಧಿಕಾರಿ ಕಚೇರಿ, ಜಿಪಂ ಸೇರಿ ನ್ಯಾಯಾಲಯದ ಆವರಣದಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಸಮಸ್ಯೆ ಪರಿಹರಿಸಬೇಕು ಎಂದು ನಿರ್ದೇಶಿಸಿದರು.
ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಮಾತನಾಡಿ, ಆಟೋಗಳು ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ನಿಲುಗಡೆಗೊಳಿಸಲು ಅವಕಾಶ ಕಲ್ಪಿಸಬಾರದು. ನಿಯೋಜಿತ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸುವಂತೆ ಆಟೋ ರಿಕ್ಷಾ ಸಂಘ ಸಂಘಗಳಗೆ ಸೂಚಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ರಾಷ್ಟೀಯ ಹೆದ್ದಾರಿಯ ನಿಪ್ಪಾಣಿ-ಕೊಲ್ಲಾಪುರ ರಸ್ತೆಯಲ್ಲಿ ಕಾಮಗಾರಿಗಳು ನಡೆಯುತ್ತಿರುವಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಈಗಾಗಲೇ ರಸ್ತೆ ನಿರ್ಮಾಣವಾಗಿ ವಾಹನಗಳು ಸಂಚಾರ ಮಾಡುತ್ತಿರುವ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡಿಸಬೇಕು ಎಂದು ಹೇಳಿದರು.
ಎಎಸ್ಪಿ ಆರ್.ಬಿ ಬಸರಗಿ, ಪಾಲಿಕೆ ಆಯುಕ್ತ ಎಂ. ಕಾರ್ತಿಕ, ಜಿಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಡಿಎಚ್‌ಒ ಈಶ್ವರ ಗಡಾದಿ ಇತರರಿದ್ದರು.