ಬೆಳಗಾವಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೋಶ್ ಕಾಯ್ದೆ ಕುರಿತ ತರಬೇತಿ ಕಾರ್ಯಾಗಾರವನ್ನು ಡಾ.ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ಪ್ರಶಾಂತ ತುರಮುರಿ, ರೂಪಾ ಆರ್., ನಿರಂಜನರಾಜೆ ಅರಸ, ರವಿ ದೊಡ್ಡಮನಿ, ರವಿ ಬಂಗಾರೆಪ್ಪನವರ ಇತರರಿದ್ದರು. 
ಬೆಳಗಾವಿ

ಪುರಷರಿಗೂ ಪ್ರತ್ಯೇಕ ಆಯೋಗ ಬೇಕು

ಡಿ.ವಿ. ಕಮ್ಮಾರ
ಬೆಳಗಾವಿ : ಮಹಿಳೆಯರಂತೆ ಪುರುಷರಿಗೂ ಕಿರುಕುಳ ಇದ್ದು, ಅವರ ನೋವು ಕೇಳಲು ಪ್ರತ್ಯೇಕ ಆಯೋಗ ಇಲ್ಲ. ಇದನ್ನು ಸಿಎಂ ಅವರೇ ಮಾಡಬೇಕಾಗುತ್ತದೆ. ಹೀಗಾಗಿ, ಪುರುಷರು ಅವರಲ್ಲೇ ಬೇಡಿಕೆ ಇಡುವುದು ಸೂಕ್ತ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸುವರ್ಣ ವಿಧಾನ ಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ ಮತ್ತು ನಿವಾರಿಸುವಿಕೆ) ಕಾಯ್ದೆ 2013ರ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಆಯೋಗ ರಚನೆಯಾಗಿ 30 ವರ್ಷವಾಗಿದೆ. ಈವರೆಗೂ ಪ್ರಾಶಸ್ತ್ಯ ಕೊಡುವ ಕೆಲಸವಾಗಿಲ್ಲ. ನಮ್ಮಲ್ಲಿ ಐವರನ್ನು ಹೊರಗುತ್ತಿಗೆ ಮೇಲೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ. ಅರ್ಜಿ, ದೂರುಗಳ ಕಡತಗಳನ್ನು ಇಡುವುದಕ್ಕೂ ಕಚೇರಿಯಲ್ಲಿ ಸ್ಥಳಾವಕಾಶವಿಲ್ಲ. ಸಹಾಯವಾಣಿ, ಆನ್‌ಲೈನ್ ಅರ್ಜಿ ಸಲ್ಲಿಕೆ, ವಿಲೇವಾರಿ ಕೆಲಸವೂ ಆಗಬೇಕಿದೆ. ಇದೆಲ್ಲವನ್ನು ಮಾಡಿ ಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮಹಿಳೆಯರಿಗೆ ಲೈಂಗಿಕ ಕಿರುಕುಳಮುಕ್ತ ವಾತಾವರಣ ಕಲ್ಪಿಸುವುದು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ(ಪೋಶ್) ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ. ಪ್ರತಿ ಸಂಸ್ಥೆಯಲ್ಲಿಯೂ ಪೋಶ್ ಕಾಯ್ದೆಯ ನಿಯಮ ಅನುಷ್ಠಾನಗೊಳಿಸುವ ಮೂಲಕ ಮಹಿಳೆಯರ ಗೌರವ, ಘನತೆ ಹಾಗೂ ಸುರಕ್ಷತೆ ಕಾಪಾಡಬೇಕು. ಆದರೆ, ನಮ್ಮಲ್ಲಿ ಶೇ.80ರಷ್ಟು ಜನರಿಗೆ ಈವರೆಗೂ ಕಾಯ್ದೆ ಬಗ್ಗೆ ಅರಿವಿಲ್ಲ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಪ್ರಶಾಂತ ತುರಮುರಿ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಆಯೋಗದ ಕಾರ್ಯದರ್ಶಿ ರೂಪಾ ಆರ್., ಪೊಲೀಸ್ ಉಪ ಅಧೀಕ್ಷಕರಾದ ನಿರಂಜನ ಅರಸ, ರವಿ ದೊಡ್ಡಮನಿ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್.ಚೇತನಕುಮಾರ, ಶಂಕರ ಹೆಗಡೆ, ಅಣ್ಣಪ್ಪ ಹೆಗಡೆ ಇತರರಿದ್ದರು.