ಬೆಳಗಾವಿ ತಾಲೂಕಿನ ರಕ್ಕಸಕೊಪ್ಪ ಜಲಾಶಯಕ್ಕೆ ಶುಕ್ರವಾರ ಮೇಯರ್ ಪ್ರೀತಿ ಕಾಮಕರ ಬಾಗಿನ ಅರ್ಪಿಸಿದರು. ಹನಮಂತ ಕೊಂಗಾಲಿ, ಕಾರ್ತಿಕ ಎಂ., ಗಿರೀಶ ಧೋಂಗಡಿ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದು ಸಂತಸ ತಂದಿದೆ. ಇನ್ನು ಮುಂದೆ ನಗರದ ಜನತೆಗೆ ಕುಡಿಯುವ ನೀರಿನ ತೊಂದರೆಯಾಗಲಾರದು. ಆದರೂ ಸಾರ್ವಜನಿಕರು ನೀರಿನ ಮಹತ್ವ ಅರಿತು ಮಿತವಾಗಿ ಬಳಕೆ ಮಾಡಬೇಕು ಎಂದು ಮಹಾಪೌರ ಪ್ರೀತಿ ಕಾಮಕರ ಕೋರಿದರು.
ರಕ್ಕಸಕೊಪ್ಪ ಜಲಾಶಯಕ್ಕೆ ಶುಕ್ರವಾರ ಬಾಗಿನ ಅರ್ಪಿಸಿದ ಬಳಿಕ ಮಾಥನಾಡಿದ ಅವರು, ನೀರಿನ ಸದ್ವಿನಿಯೋಗ ಮಾಡಲು ಎಲ್ಲರೂ ಕಟಿಬದ್ಧರಾಗಿರಬೇಕು ಎಂದು ಹೇಳಿದರು.
ಮಂತ ಕೊಂಗಾಲಿ ಮಾತನಾಡಿ, ಜಲಾಶಯದಿಂದ 42 ಎಂಎಲ್‌ಡಿ ಮತ್ತು ಹಿಡಕಲ್ ಜಲಾಶಯದಿಂದ 60 ಎಂಎಲ್‌ಡಿಯಷ್ಟು ನೀರು ನಗರಕ್ಕೆ ಪೂರೈಕೆ ಆಗುತ್ತಿದೆ. ಜಲಾಶಯ ಭರ್ತಿಯಾಗಿದ್ದರಿಂದ ಬರುವ ಮೇವರೆಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಲಾರದು. ಪಾಲಿಕೆಯಲ್ಲಿ ಚರ್ಚಿಸಿ ಜಲಾಶಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಪಾಲಿಕೆ ಆಯುಕ್ತ ಕಾರ್ತಿಕ ಎಂ. ಮಾತನಾಡಿ, ನೀರಿನ ಕೊರತೆಯ ಸಂದರ್ಭದಲ್ಲಿ ಅನುಸರಿಸಲಾಗುತ್ತಿದ್ದ ನೀರು ಸರಬರಾಜು ನಿಯಮಗಳನ್ನು ರದ್ದುಪಡಿಸಿ ಈ ಮೊದಲಿನ ನಿಯಮದಂತೆ ನಗರದ 58 ವಾರ್ಡ್‌ಗಳ 80,000 ಸಂಪರ್ಕಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ, ನಗರಸೇವಕರಾದ ಗಿರೀಶ ಧೋಂಗಡಿ, ಜಯತೀರ್ಥ ಸವದತ್ತಿ, ಮಂಗೇಶ ಪವಾರ, ಶ್ರೀಶೈಲ ಕಾಂಬಳೆ, ರೇಖಾ ಹೂಗಾರ, ದೀಪಾಲಿ ಟೊಪಗಿ, ಲಕ್ಷ್ಮೀ ರಾಥೋಡ್, ಸ್ಥಾಯಿ ಸಮಿತಿ ಸದಸ್ಯರು, ಪರಿಷತ್ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ ಇತರರಿದ್ದರು.