ಬೆಳಗಾವಿ ಶಹಾಪುರದ ಚಿಂತಾಮಣರಾವ್ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಪ್ರತಿಮೆಯನ್ನು ಅಮೆರಿಕ ಸಂಸದ ಶ್ರೀನಿವಾಸ ಠಾಣೇದಾರ ಅನಾವರಣಗೊಳಿಸಿದರು. ಜಗದೀಶ ಶೆಟ್ಟರ, ಅಭಯ ಪಾಟೀಲ, ಮಂಗೇಶ ಪವಾರ, ವಿಜಯಸಿಂಗ್ ರಾಜೆ ಪಟವರ್ಧನ್ ಇತರರಿದ್ದಾರೆ. 
ಬೆಳಗಾವಿ

ಸುವರ್ಣ ವಿಧಾನಸೌಧ ಸದ್ಬಳಕೆಯಾಗಲಿ

ಬೆಳಗಾವಿ: ಸುವರ್ಣ ವಿಧಾನ ಸೌಧ ಸೇರಿ ಇಲ್ಲಿರುವ ಸಂಪನ್ಮೂಲನ ಸದ್ಬಳಕೆ ಮಾಡಿಕೊಂಡು ಬೆಳಗಾವಿ ಇನ್ನಷ್ಟು ಪ್ರಗತಿಯಾಗಬೇಕಿದೆ ಎಂದು ಅಮೆರಿಕ ಸಂಸದ, ಶಹಾಪುರ ನಿವಾಸಿ ಶ್ರೀನಿವಾಸ ಠಾಣೇದಾರ ಹೇಳಿದರು.
ಇಲ್ಲಿನ ಶಹಾಪುರದಲ್ಲಿನ ಚಿಂತಾಮಣರಾವ್ ಪ್ರೌಢಶಾಲೆಯ ಶತಮಾನೋತ್ಸವ ಸಮಾರೋಪದಲ್ಲಿ ಭಾನುವಾರ ಮಾಜಿ ವಿದ್ಯಾರ್ಥಿಯಾಗಿ ಪಾಲ್ಗೊಂಡು ಶ್ರೀಮಂತ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ಓರ್ವ ಸಾಧಾರಣ ವಿದ್ಯಾರ್ಥಿಯಾಗಿದ್ದ ನಾನು ಬಡತನದ ಕಾರಣ ಆಸ್ಪತ್ರೆಯೊಂದರಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುತ್ತ ಬಿಎಸ್ಸಿ ಪದವಿ ಪಡೆದಿದ್ದೆ. ಸಿಕ್ಕ ಅವಕಾಶ ಬಳಸಿಕೊಂಡು ಅಮೆರಿಕ ಸೇರಿ ಎಂಎಸ್ಸಿ, ಪಿಎಚ್.ಡಿ ನಂತರ ಔಷಧಶಾಸ್ತ್ರ ಅಧ್ಯಯನ ಮಾಡಿ, ವ್ಯವಹಾರದಲ್ಲಿ ತೊಡಗಿದೆ. ಜನರ ನಡುವೆ ಬೆಳೆದು ಸಂಸದನಾಗಿದ್ದೇನೆ ಎಂದು ಸ್ಮರಿಸಿಕೊಂಡರು.
ಶಾಸಕ ಅಭಯ ಪಾಟೀಲ ಮಾತನಾಡಿ, ಸಾಂಗ್ಲಿಯ ಶ್ರೀಮಂತ ರಾಜೆಸಾಹೇಬ ಚಿಂತಾಮಣರಾವ್ ಪಟವರ್ಧನ ಹಾಗೂ ರಾಣಿ ಸರಸ್ವತಿ ದೇವಿ ಪಟವರ್ಧನ 1914ರಲ್ಲಿ ಗಂಡು ಮಕ್ಕಳಿಗಾಗಿ ಚಿಂತಾಮಣರಾವ್ ಶಾಲೆ, ಹೆಣ್ಣುಮಕ್ಕಳಿಗಾಗಿ ಸರಸ್ವತಿ ಶಾಲೆ ಆರಂಭಿಸಿದ್ದರು. 1ರಿಂದ 5ನೇ ತರಗತಿ ಹೊಂದಿದ್ದ ಶಾಲೆ, 1920-21ರಲ್ಲಿ ಪ್ರೌಢಶಾಲೆಯಾಗಿ ಬದಲಾಯಿತು. ಬಳಿಕ ಕಾಲಕಾಲಕ್ಕೆ ಅಭಿವೃದ್ಧಿ ಮಾಡಲಾಗಿದೆ ಎಂದರು.
ಸಂಸದ ಜಗದೀಶ ಶೆಟ್ಟರ, ಚಿಂತಾಮಣರಾವ್ ವಂಶಸ್ಥರಾದ ವಿಜಯಸಿಂಗ್ ರಾಜೆ ಪಟವರ್ಧನ, ರೋಹಿಣಿ ಪಟವರ್ಧನ, ಬಾಲಿವುಡ್ ನಟಿ ಪೂರ್ಣಿಮಾ ಪಟವರ್ಧನ್, ಮೇಯರ್ ಮಂಗೇಶ ಪವಾರ ಇತರರಿದ್ದರು.