ನಿಪ್ಪಾಣಿ ನಗರಸಭೆಯಲ್ಲಿ ಗಣೇಶೋತ್ಸವ ಸಿದ್ಧತೆ ಕುರಿತು ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿದರು. ಸುರೇಶ ಮುಂಜೆ, ಬಿ.ಎಸ್.ತಳವಾರ,ಸುದೀಪ ಚೌಗುಲಾ ಇತರರಿದ್ದರು. 
ಬೆಳಗಾವಿ

ಗಣೇಶೋತ್ಸವ ಸೌಹಾರ್ದಯುತವಾಗಿರಲಿ

ನಿಪ್ಪಾಣಿ: ಗಣೇಶೋತ್ಸವ ಹಿನ್ನೆಲೆಯಲ್ಲಿ ನಗರದ ಮಂಡಳಿಗಳಿಗೆ ನಗರಸಭೆಯಲ್ಲಿ ಹಾಗೂ ತಾಲೂಕಿನ ಗಣೇಶ ಮಂಡಳಿಗಳಿಗೆ ತಹಸೀಲ್ದಾರ್ ಕಚೇರಿಯಲ್ಲಿ ಪೊಲೀಸ್, ಹೆಸ್ಕಾಂ ಸೇರಿದಂತೆ ಸಂಬಂಧಿತ ಇಲಾಖೆಗಳ ಪರವಾನಗಿ ಒಂದೇ ಸ್ಥಳದಲ್ಲಿ ನೀಡಲು ಒಂದೇ ಕಿಟಕಿ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಇಲ್ಲಿನ ನಗರಸಭೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗಣೇಶೋತ್ಸವ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿ, ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಎರಡು ಟಾಪ್ ಹಾಗೂ ಎರಡು ಬೇಸ್ ಸೌಂಡ್ ಸಿಸ್ಟಂ ಬಳಸಲು ಅವಕಾಶ ಕಲ್ಪಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿರಂತರ ವಿದ್ಯುತ್ ಪೂರೈಕೆಯಾಗಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಿಪ್ಪಾಣಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ 500ಕ್ಕೂ ಅಧಿಕ ಗಣೇಶ ಮಂಡಳಿಗಳಿದ್ದು, ಅದರಲ್ಲಿ 10 ಅತಿ ಸೂಕ್ಷ್ಮ ಹಾಗೂ 43 ಸೂಕ್ಷ್ಮ ಮಂಡಳಿಗಳಿವೆ. ಗ್ರಾಮೀಣ ಭಾಗದಲ್ಲಿ ಪಿಡಿಒ ಮೂಲಕ ಮಂಡಳಿಗಳ ಸಮೀಕ್ಷೆ ನಡೆಸಿ ತ್ವರಿತ ಪರವಾನಗಿ ನೀಡಬೇಕು. ಗಣೇಶ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಗುಂಡಿ ಮುಚ್ಚುವುದು, ಸ್ವಚ್ಛತೆ ಹಾಗೂ ಅಗತ್ಯ ಸೌಕರ್ಯ ಕಲ್ಪಿಸುವಂತೆ ಸೂಚಿಸಿದರು. ಅಗ್ನಿಶಾಮಕ ದಳ ಹಾಗೂ ಆರೋಗ್ಯ ಇಲಾಖೆ ಸನ್ನದ್ಧವಾಗಿರಬೇಕು. ತುರ್ತು ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಗ್ನಿಶಾಮಕ ವಾಹನ ಮತ್ತು ಜೊಲ್ಲೆ ಗ್ರೂಪ್ ಆಂಬುಲೆನ್ಸ್ ಬಳಸಿಕೊಳ್ಳಬಹುದು ಎಂದರು.
ತಹಸೀಲ್ದಾರ್ ಸುರೇಶ ಮುಂಜೆ ಮಾತನಾಡಿ, ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು. ಸಿಪಿಐ ಬಿ.ಎಸ್.ತಳವಾರ ಮಾತನಾಡಿ, ಗಣೇಶ ಮಂಡಳಿಗಳು ಪೊಲೀಸ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುದೀಪ ಚೌಗುಲಾ, ಪಿಎಸ್‌ಐ ಜಿ.ಎಸ್.ಪೂಜೇರಿ, ಶಿವರಾಜ ನಾಯಿಕವಾಡಿ, ರಮೇಶ ಪವಾರ, ಎನ್.ಎಸ್.ನದ್ಾ, ಹೆಸ್ಕಾಂನ ಅಕ್ಷಯ ಚೌಗುಲಾ, ಡಾ.ಈಶ್ವರ ಪತ್ತಾರ, ಅಗ್ನಿಶಾಮಕ ದಳದ ಎಸ್.ಜಿ.ಕೋರೆ, ನಗರಸಭೆ ಅಭಿಯಂತ ವಿವೇಕ ಜೋಶಿ, ಮಾಜಿ ಉನಗರಧ್ಯಕ್ಷ ಸುನೀಲ ಪಾಟೀಲ, ರಾಜು ಗುಂದೇಷಾ ಇತರರಿದ್ದರು.