ಕನ್ಹೇರಿ ಶ್ರೀಗಳಿಗೆ ವಿಧಿಸಿರುವ ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಗಣಪತಿ ಪಾಟೀಲಗೆ ಶಾಸಕಿ ಶಶಿಕಲಾ ಜೊಲ್ಲೆ ಮನವಿ ಸಲ್ಲಿಸಿದರು. ಮಲಗೊಂಡ ಪಾಟೀಲ, ಪವನಕುಮಾರ ಪಾಟೀಲ ಇತರರಿದ್ದರು. 
ಬೆಳಗಾವಿ

ಕನ್ಹೇರಿ ಶ್ರೀಗಳ ಮೇಲಿನ ನಿರ್ಬಂಧ ರದ್ದಾಗಲಿ

ನಿಪ್ಪಾಣಿ: ದೇವರು, ಧರ್ಮ ಮತ್ತು ರಾಷ್ಟ್ರ ಮುಖ್ಯವೆಂದು ಸಾರುವ ಸಂತರ ವಿರುದ್ಧವೇ ರಾಜ್ಯ ಸರ್ಕಾರ ಕ್ರಮವಹಿಸುತ್ತಿದ್ದು, ಕನ್ಹೇರಿ ಸಿದ್ಧಗಿರಿ ಸಂಸ್ಥಾನಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧಿಸಿರುವುದು ಖಂಡನೀಯ. ಕೂಡಲೇ ರಾಜ್ಯ ಸರ್ಕಾರ ನಿರ್ಬಂಧ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ಕೈಗೊಳ್ಳಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಎಚ್ಚರಿಕೆ ನೀಡಿದರು.
ಬುಧವಾರ ನಗರದಲ್ಲಿ ತಾಲೂಕಿನ ಬಸವಾದಿ ಶರಣರು ಹಾಗೂ ಹಿಂದು ಬಾಂಧವರ ವತಿಯಿಂದ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಗಣಪತಿ ಪಾಟೀಲ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನಮ್ಮದು ಸುಸಂಸ್ಕೃತ ದೇಶ. ಮಹಾತ್ಮ ಬಸವೇಶ್ವರ, ಮಹಾವೀರ, ಬುದ್ಧ, ಸಂತ ನಾಮದೇವ, ತುಕಾರಾಮ, ಜ್ಞಾನೇಶ್ವರಂಥ ಸಂತರ ನಾಡು. ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರನ್ನು ರಾಷ್ಟ್ರಸಂತರನ್ನಾಗಿ ನೋಡುತ್ತೇವೆ. ಅವರು ಮಹಾರಾಷ್ಟ್ರಕ್ಕೆ ಸೀಮಿತರಾಗಿಲ್ಲ. ಅವರು ಅಧ್ಯಾತ್ಮದೊಂದಿಗೆ ರೈತರ ಹಿತ ಕಾಯುತ್ತಿದ್ದಾರೆ ಎಂದರು.
ಬಾದಾಮಿಯ ಬಸವರಾಜೇಂದ್ರ ಸ್ವಾಮೀಜಿ ಮಾತನಾಡಿ, ಮಹಾನ್ ಸಂತರಾಗಿ ಬೆಳೆಯುತ್ತಿರುವ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಅವಿವೇಕತನದ ಪರಮಾವಧಿ. ಸಮಾಜದಲ್ಲಿನ ಅಸಮಾನತೆ ವಿರುದ್ಧ ಮಾತನಾಡಿದ್ದಕ್ಕೆ ಇಂಥ ಕ್ರಮ ಕೈಗೊಂಡಿದ್ದು, ಅಸಹನೀಯ. ಕಾಡಸಿದ್ಧೇಶ್ವರ ಸ್ವಾಮೀಜಿ ಕರೆ ನೀಡಿದರೆ ದೇಶಾದ್ಯಂತ ಪ್ರತಿಭಟನೆ ನಡೆಯುತ್ತವೆ ಎಂಬುದನ್ನು ರಾಜ್ಯ ಸರ್ಕಾರ ತಿಳಿದುಕೊಳ್ಳಬೇಕು ಎಂದು ಎಚ್ಚರಿಸಿದರು.
ಸ್ಥಳೀಯ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿರುವ ಉದ್ದೇಶ ತಿಳಿದುಕೊಳ್ಳಬೇಕಿತ್ತು. ಅವರು ಸರ್ಕಾರದ ವಿರುದ್ಧ ಮಾತನಾಡಿಲ್ಲ. ಇಂಥ ತೀರ್ಮಾನ ಕೈಗೊಂಡಿರುವ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ. ಜನರ ಭಾವನೆ ಅರಿತು ಕಾಂಗ್ರೆಸ್ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದರು. ಮುರುಘೇಂದ್ರ ಮಠದ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷ ಮಲಗೊಂಡಾ ಪಾಟೀಲ, ಉಪಕಾರ್ಯಾಧ್ಯಕ್ಷ ಪವನಕುಮಾರ ಪಾಟೀಲ, ವಿಭಾವರಿ ಖಾಂಡಕೆ, ನೀತಾ ಬಾಗಡೆ, ಸುನೀಲ ಪಾಟೀಲ, ಜಯವಂತ ಭಾಟಲೆ, ಸಿದ್ದು ನರಾಟೆ, ನಗರಸಭೆ ಸದಸ್ಯರು, ಬಸವಾದಿ ಶರಣರು ಹಾಗೂ ಹಿಂದು ಕಾರ್ಯಕರ್ತರು ಇದ್ದರು.