ಅಂಕಲಿಯ ಡಾ.ಎನ್.ಎ. ಮಗದುಮ್ಮ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ ಬಿಮ್ಸ್ ನರ್ಸಿಂಗ್ ಕಾಲೇಜು ಪ್ರಾಚಾರ್ಯ ನಾಮದೇವ ಮಾಳಗಿ ಅವರನ್ನು ಸನ್ಮಾನ ಮಾಡಲಾಯಿತು. ಡಾ.ಎನ್. ಎ.ಮಗದುಮ್ಮ, ಲಲಿತಾ ಮಗದುಮ್ಮ ಇತರರಿದ್ದರು.
ಮಾಂಜರಿ: ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಶುಶ್ರೂಷಕರ ಪಾತ್ರ ಮುಖ್ಯವಾಗಿದೆ ಎಂದು ಬಿಮ್ಸ್ ನರ್ಸಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ನಾಮದೇವ ಮಾಳಗಿ ಹೇಳಿದರು.
ಸಮೀಪದ ಅಂಕಲಿ ಗ್ರಾಮದಲ್ಲಿರುವ ಗೊಮ್ಮಟೇಶ ಶಿಕ್ಷಣ ಸಂಸ್ಥೆಯ ಡಾ.ಎನ್.ಎ.ಮಗದುಮ್ಮ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಎಸ್ಸಿ ನರ್ಸಿಂಗ್, ಜಿಎನ್‌ಎಂ ವಿದ್ಯಾರ್ಥಿಗಳ ದೀಪ ಪ್ರಜ್ವಲನ, ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶುಶ್ರೂಷಕರು ಕರುಣೆ, ಮಮತೆ, ಸಹನೆ ಹೊಂದಿರಬೇಕು. ಎಲ್ಲ ರೋಗಿಗಳನ್ನು ತಾಳ್ಮೆಯಿಂದ ಪರಿಶೀಲಿಸಿ ಜೀವ ಉಳಿಸುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಅರೆವೈದ್ಯಕೀಯ ವೃತ್ತಿ ಶಿಕ್ಷಣ ಪಡೆದು ವೈದ್ಯಕೀಯ ತಂಡದ ಒಂದು ಭಾಗವಾಗಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಅಧ್ಯಕ್ಷ ಡಾ.ಎನ್.ಎ.ಮಗದುಮ್ಮ ಮಾತನಾಡಿ, ಶಿಕ್ಷಣ ವ್ಯಕ್ತಿಯ ಬದುಕಿಗೆ ಉತ್ತರವಾಗಬೇಕು. ಜತೆಗೆ ಸ್ವಾವಲಂಬಿಯನ್ನಾಗಿ ಮಾಡಬೇಕು. ಪ್ರಸ್ತುತ ಅಂದಾಜು ೬೦ ಲಕ್ಷ ದಾದಿಯರ ಅವಶ್ಯಕತೆ ಇದೆ. ೧೯೯೦ರಲ್ಲಿ ೫೦ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿದೆ ಎಂದು ತಿಳಿಸಿದರು.
ಗೊಮ್ಮಟೇಶ ಶಿಕ್ಷಣ ಸಂಸ್ಥೆ ಖಜಾಂಚಿ ಲಲಿತಾ ಮಗದುಮ್ಮ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಸುರೇಶ ಚೌಗುಲಾ ಮಾತನಾಡಿದರು. ಬಿಎಸ್ಸಿ ನರ್ಸಿಂಗ್ ಹಾಗೂ ಜಿಎನ್‌ಎಂ ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಹಜರತ್‌ಅಲಿ ಪಾಣಾರಿ ಪ್ರತಿಜ್ಞಾವಿಧಿ ಬೋಧಿಸಿದರು. ಚಂದ್ರಶೇಖರ ಹಾದಿಮನಿ, ಪ್ರೇಮ ತೇಲಿ, ಹೀನಾ ಜಮಾದಾರ್, ವಾಜೀದ್ ಟಿ.ದಯಾರೂನ್ ಮಿರಜಕರ್ ಇತರರಿದ್ದರು.