ಹುಕ್ಕೇರಿ ವಿಶ್ವರಾಜ ಭವನದಲ್ಲಿ ಹಮ್ಮಿಕೊಂಡಿದ್ದ ವಿಶಾಲ ಹಿಂದೂ ಸಮ್ಮೇಳನವನ್ನು ಚಂದ್ರಶೇಖರ ಶಿವಾಚಾರ್ಯರು ಉದ್ಘಾಟಿಸಿದರು. ಶಿವಬಸವ ಸ್ವಾಮೀಜಿ, ಶರಣೇಗೌಡ, ರಾಮಚಂದ್ರ ಜೋಶಿ, ಪೃಥ್ವಿ ಕತ್ತಿ, ಮಹಾವೀರ ನಿಲಜಗಿ ಇತರರಿದ್ದರು. 
ಬೆಳಗಾವಿ

ಹಿಂದೂಗಳು ಒಗ್ಗಟ್ಟಿನಿಂದ ಬದುಕಲಿ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಶರಣೇಗೌಡ ಕರೆ
  • ಹುಕ್ಕೇರಿಯಲ್ಲಿ ವಿಶಾಲ ಸಮ್ಮೇಳನ
ಹುಕ್ಕೇರಿ: ಸಾಮರಸ್ಯ, ಏಕರೂಪ ನಾಗರಿಕ ಸಂಹಿತೆ, ಪರಿಸರ ಸಂರಕ್ಷಣೆ, ಸ್ವದೇಶಿ ವಸ್ತುಗಳ ಬಳಕೆ ಮತ್ತು ಅವಿಭಕ್ತ ಕುಟುಂಬ ಉಳಿಸುವ ಪರಿವರ್ತನೆಯ ಪಂಚಸೂತ್ರಗಳನ್ನು ಹಿಂದೂ ಸಮುದಾಯ ಅಳವಡಿಸಿಕೊಳ್ಳಬೇಕಿದೆ ಎಂದು ಯುವ ಭಾರತ ರಾಜ್ಯ ಪ್ರಮುಖ ಶರಣೇಗೌಡ ಹೇಳಿದರು.
ಸ್ಥಳೀಯ ವಿಶ್ವರಾಜ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶಾಲ ಹಿಂದೂ ಸಮ್ಮೇಳನದಲ್ಲಿ ಮಾತನಾಡಿ, ಹಿಂದೂ ಸಮುದಾಯದ ಉಳಿಸಿ, ಬೆಳೆಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಒಡೆದು ಆಳುವ ನೀತಿ ಮೂಲಕ ನಮ್ಮ ಒಗ್ಗಟ್ಟು ಮುರಿಯುತ್ತಿದ್ದಾರೆ ಎಂದರು.
ವಿದೇಶಿಗರು ನಮ್ಮ ಇತಿಹಾಸ ತಿರುಚಿ ಭಾರತವನ್ನು ವಾಸ್ಕೋಡಿಗಾಮಾ ಕಂಡುಹಿಡಿದನು ಎಂದು ಹೇಳಿರುವರು. ಆದರೆ, ಅವನು ಭಾರತಕ್ಕೆ ಬರುವ ಮುಂಚೆಯೇ ಅರಬ್, ಚೀನಾ, ಥಾಯ್ಲೆಂಡ್, ಇಂಡೋನೇಷ್ಯಾ, ಜಪಾನ ಸೇರಿ ಹಲವಾರು ದೇಶಗಳಲ್ಲಿ ನಮ್ಮ ದೇಶದ ಸಂಸ್ಕೃತಿ, ಧರ್ಮ ಪಸರಿಸಿತ್ತು ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಆದರೆ, ಇವೆಲ್ಲವನ್ನು ಮರೆಮಾಚಿ ಪಾಶ್ಚಾತ್ಯ ಮತ್ತು ಮೊಘಲರ ಇತಿಹಾಸ ಪರಿಚಯಿಸಿದ್ದು ವಿಷಾದಕರ. ಇತ್ತೀಚಿನ ದಿನಗಳಲ್ಲಿ ಹಿಂದೂತ್ವ ಅಳಿಸಲು ಜಾತಿ ತಾರತಮ್ಯ, ನಮ್ಮವರನ್ನೇ ನಮ್ಮ ಮೇಲೆ ಎತ್ತಿ ಕಟ್ಟುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದರು.
ವಕೀಲ ರಾಮಚಂದ್ರ ಜೋಶಿ ಮಾತನಾಡಿದರು.
ಸ್ಥಳೀಯ ಅಡವಿಸಿದ್ಧೇಶ್ವರ ಮಠದಿಂದ ಸಮ್ಮೇಳನದ ಶೋಭಾಯಾತ್ರೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ವಿಶ್ವರಾಜ ಸಭಾಭವನ ತಲುಪಿತು. ಅತಿಥಿಗಳನ್ನು ಸನ್ಮಾನಿಸಲಾಯಿತು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಶಿವಬಸವ ಸ್ವಾಮೀಜಿ, ಉದ್ಯಮಿ ಪೃಥ್ವಿ ಕತ್ತಿ, ಸತ್ಯಪ್ಪ ನಾಯಿಕ, ಮಹಾವೀರ ನಿಲಜಗಿ, ಸಂಜೀವ ಮುತಾಲಿಕ, ಅನಿಲ ಶೆಟ್ಟಿ ಇತರರಿದ್ದರು.
"

ನಮ್ಮ ಸಂಸ್ಕೃತಿ ಧರ್ಮದ ಮೇಲೆ ವಿದೇಶಿಗರು ಹಲವು ಬಾರಿ ದಾಳಿ ಮಾಡಿದರೂ ಹಿಂದೂ ಸಂಸ್ಕೃತಿ, ಆಚಾರ ವಿಚಾರ ಉಳಿಸಿಕೊಂಡಿದ್ದು ಸ್ಮರಣೀಯ. ಸ್ವಾಭಿಮಾನದ ಮೇಲೆ ನಡೆಯುವ ದಾಳಿಯನ್ನು ಹಿಮ್ಮೆಟ್ಟಿಸುವ ಮೂಲಕ ಹಿಂದೂಗಳಾಗಿ ಒಗ್ಗಟ್ಟಿನಿಂದ ಬದುಕೋಣ.