ಬೆಳಗಾವಿಯ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಜರುಗಿದ ಕಾರ್ಯಾಗಾರದಲ್ಲಿ ಲಕ್ಷ್ಮಣ ಅಷ್ಟಗಿ, ಡಾ.ಜ್ಯೋತಿ ಕವಳೇಕರ, ಡಾ.ವಿಜಯಲಕ್ಷ್ಮೀ ಪಾಟೀಲ, ಡಾ.ವಿನಯಕುಮಾರ ಪಾಲ್ಗೊಂಡಿದ್ದರು.
ಬೆಳಗಾವಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡ್ಡಾಯ ಕನ್ನಡ ವಿಷಯದ ಬಗ್ಗೆ ಅಭ್ಯರ್ಥಿಗಳು ಹೆಚ್ಚು ಅಧ್ಯಯನ ಮಾಡಬೇಕಿದ್ದರೂ ಗಣಿತದ ಜ್ಞಾನವೂ ಉತ್ತೀರ್ಣರಾಗಲು ಹೆಚ್ಚು ಸಹಕಾರಿಯಾಗುತ್ತದೆ ಎಂದು ಗಡಿನಾಡು ತರಬೇತಿ ಕೇಂದ್ರದ ಸಂಸ್ಥಾಪಕ ಲಕ್ಷ್ಮಣ ಮಲ್ಲಪ್ಪ ಅಷ್ಟಗಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ವತಿಯಿಂದ ಐಕ್ಯೂಎಸಿ ಅಡಿಯಲ್ಲಿ ‘ಕನಸು, ಸಿದ್ಧತೆ, ಯಶಸ್ಸು’ ಶೀರ್ಷಿಕೆಯಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವೃತ್ತಿ ಮಾರ್ಗದರ್ಶನ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿವಿಧ ಸರ್ಕಾರಿ ಹುದ್ದೆಗಳ ಮಾಹಿತಿ ನೀಡಿ ಆ ಹುದ್ದೆಗಳಿಯ ಪರೀಕ್ಷೆಗೆ ಇರುವ ಪಠ್ಯಕ್ರಮ, ಸಂಪನ್ಮೂಲ ಸಂಗ್ರಹಣೆ ಮತ್ತು ತಯಾರಿಯ ಕುರಿತು ವಿವರಿಸಿದರು.
ಪ್ರಾಚಾರ್ಯ ಡಾ.ಜ್ಯೋತಿ ಕವಳೇಕರ ಅಧ್ಯಕ್ಷತೆ ವಹಿಸಿದ್ದರು.ಸ್ನೇಹಾ ಮತ್ತು ಸೋನಾಲಿ ಪ್ರಾರ್ಥಿಸಿದರು. ಪಲ್ಲವಿ ಕುಲಕರ್ಣಿ ಸ್ವಾಗತಿಸಿದರು. ದಿವ್ಯಾ ಸಾಗರೇಕರ ಪರಿಚಯಿಸಿದರು. ಪ್ರೇರಣಾ ಸನಗಾಯಿ ವಂದಿಸಿದರು. ಭಾವನಾ ಕದಮ್ ಮತ್ತು ಸೇಜಲ್ ಹನುಮಸೇಠ ನಿರೂಪಿಸಿದರು.
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಗಣಿತ ಮತ್ತು ಸಂಖ್ಯಾಶಾಸ್ತ್ರ ಸಂಘದ ಅಧ್ಯಕ್ಷೆ ಡಾ.ವಿಜಯಲಕ್ಷ್ಮೀ ಪಾಟೀಲ, ಐಕ್ಯೂಎಸಿ ಸಂಯೋಜಕ ಡಾ.ವಿನಯಕುಮಾರ ಎಂ., ಅಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.