ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ಗೊತ್ತುವಳಿ ಅಂಗೀಕರಿಸದಿರುವುದನ್ನು ಖಂಡಿಸಿ ಕರವೇ ಕಾರ್ಯಕರ್ತರು ಬುಧವಾರ ಮುತ್ತಿಗೆ ಹಾಕಲು ಗೇಟ್ ಏರಿದಾಗ ಪೊಲೀಸರು ತಡೆದರು.
ಕನ್ನಡಪರ ನಿರ್ಣಯ ಅಂಗೀಕರಿಸದ ಮಹಾನಗರ ಪಾಲಿಕೆ ಧೋರಣೆ ಖಂಡಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಾಲಿಕೆ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ವೇದಿಕೆ ಜಿಲ್ಲಾ ಅಧ್ಯಕ್ಷ ಆರ್.ಅಭಿಲಾಷ್ ನೇತೃತ್ವದಲ್ಲಿ, ನೂರಾರು ಕಾರ್ಯಕರ್ತರು ಮುತ್ತಿಗೆಗೆ ಮುಂದಾದಾಗ ಪೊಲೀಸರು ಮುಖ್ಯ ಗೇಟ್ ಅಡ್ಡ ಹಾಕಿ ತಡೆದರು. ಈ ವೇಳೆ ಕೆಲವು ಕಾರ್ಯಕರ್ತರು, ಗೇಟ್ ಏರಿ ಪಾಲಿಕೆ ಆವರಣಕ್ಕೆ ನುಗ್ಗಲು ಯತ್ನಿಸಿದಾಗ, ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು. ಕೊನೆಗೆ ಪೊಲೀಸರ ಮನವೋಲಿಕೆಯಿಂದ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಕನ್ನಡದ ನೆಲ, ಕನ್ನಡಿಗರ ಹಕ್ಕು ಮತ್ತು ಬೆಳಗಾವಿಯ ಕನ್ನಡ ಅಸ್ಮಿತೆಗಾಗಿ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಒಂದು ವಾರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ತನ್ನ ಕನ್ನಡಪರ ನಿಲುವನ್ನು ಸ್ಪಷ್ಟಪಡಿಸಿ, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು’ ಎಂಬ ಗೊತ್ತುವಳಿ ಅಂಗಿಕರಿಸಬೇಕು. ಇಲ್ಲದೇ ಹೋದಲ್ಲಿ ಇನ್ನೂ ಹೆಚ್ಚಿನ ಪ್ರತಿಭಟನೆ ಮಾಡುವುದಾಗಿ ಆರ್.ಅಭಿಲಾಷ್ ಎಚ್ಚರಿಕೆ ನೀಡಿದರು.
ಅರುಣ ಪಾಟೀಲ, ಗಿರಿಜಾ, ರಾಜು ಕಲ್ಪತ್ರಿ, ಸತ್ಯಪ್ಪ, ಝೋಯೆಲ್ ಇತರರಿದ್ದರು.