ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಬಸಪ್ಪ ದಶವಂತ ಐಗಳಿಗೆ ಜೀವಾವಧಿ ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿ 11ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಳಗಾವಿ ಪೀಠಾಸೀನ ಅಥಣಿ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಗ್ರಾಮದಲ್ಲಿ ಕೃಷಿ ಜಮೀನಿನ ಸೀಮೆ ವಿಷಯವಾಗಿ ಮೃತ ಶಿವಲಿಂಗಪ್ಪ ಮುರಿಗೆಪ್ಪ ಐಗಳಿ ಮತ್ತು ಅಪರಾಧಿ ಕುಟುಂಬದ ನಡುವೆ ಮೇಲಿಂದ ಮೇಲೆ ಗಲಾಟೆ ನಡೆಯುತ್ತಿತ್ತು. 2021 ಜುಲೈ 19ರಂದು ಗ್ರಾಮದ ಸರ್ಕಾರಿ ಶಾಲೆಯ ಕಟ್ಟೆ ಮೇಲೆ ಶಿವಲಿಂಗಪ್ಪ ಮಲಗಿದ್ದಾಗ ಬಸಪ್ಪ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸಿಪಿಐ ಶಂಕರಗೌಡ ಬಸನಗೌಡರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶ ಈರಣ್ಣ ಈ.ಎಸ್. ತೀರ್ಪು ನೀಡಿದ್ದಾರೆ. ದಂಡದ ಮೊತ್ತ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಒಂದು ವರ್ಷ ಸಾದಾ ಕಾರಾಗೃಹ ವಾಸ ನೀಡಲು ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಅಮೀನಸಾಬ್ ಕಲಾದಗಿ ವಾದ ಮಂಡಿಸಿದ್ದರು.