ಬೆಳಗಾವಿ ತಾಲೂಕಿನ ಅಂಬೇವಾಡಿಯಲ್ಲಿ ಬಾವಿಗೆ ಜಿಗಿದಿದ್ದ ಬಾಬು ಸಾಂಬರೆಕರರನ್ನು ರಕ್ಷಿಸಿ ಹೊರತಂದ ಬಸವರಾಜ ಹಿರೇಮಠ. 
ಬೆಳಗಾವಿ

ಬಾವಿಗೆ ಜಿಗಿದ ವ್ಯಕ್ತಿಯ ಜೀವ ರಕ್ಷಣೆ

ಬೆಳಗಾವಿ: ತಾಯಿ ಅಗಲಿಕೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ತೆರೆದ ಬಾವಿಗೆ ಹಾರಿದ್ದ ವ್ಯಕ್ತಿಯೊಬ್ಬನನ್ನು ಹರಸಾಹಸ ಮಾಡಿ ರಕ್ಷಣಾ ತಂಡದ ಮುಖ್ಯಸ್ಥರೊಬ್ಬರು ಬಾವಿಗಿಳಿದು, ಮನವೋಲಿಸಿ ಎತ್ತಿಕೊಂಡು ಬಂದು ಜೀವ ಉಳಿಸಿದ ಘಟನೆ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಅಂಬೇವಾಡಿಯ ಬಾಬು ಸಾಂಬರೆಕರ(41) ಅವರ ತಾಯಿ ಕಳೆದ ಹದಿನೈದು ದಿನಗಳ ಹಿಂದೆ ನಿಧನರಾಗಿದ್ದು, ತಾಯಿ ಅಗಲಿಕೆಯ ನೋವಿನಿಂದ ಶನಿವಾರ ಬೆಳಗ್ಗೆ 11ರ ಗೊತ್ತಿಗೆ ಗ್ರಾಮದ ಹೊರವಲಯದ ತೆರೆದ ಬಾವಿಯಲ್ಲಿ ಜಿಗಿದಿದ್ದರು. ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಹೆಲ್ಪ್‌ಲೈನ್ ಎಮರ್ಜನ್ಸಿ ರೆಸ್ಕೂೃ ಫೌಂಡೇಶನ್(ಎಚ್‌ಇಆರ್‌ಎಫ್)ಗೆ ಕರೆ ಮಾಡಿ ಸಹಾಯ ಕೇಳಿದ್ದರು. ಇಷ್ಟು ದಿನ ಆತ್ಮಹತ್ಯೆ ಮಾಡಿಕೊಂಡವರ ಮೃತದೇಹಗಳನ್ನು ಮಾತ್ರ ಹೊರತೆಗೆಯುತ್ತಿದ್ದ ಈ ತಂಡಕ್ಕೆ ಇದೇ ಮೊದಲ ಸಲ ವ್ಯಕ್ತಿ ಜೀವಂತ ಇದ್ದು, ರಕ್ಷಿಸಲು ಬನ್ನಿ ಎಂಬ ಕರೆ ಬಂದಿತ್ತು ಕೇವಲ 7 ನಿಮಿಷದಲ್ಲಿ (8ಕಿಮೀ ಅಂತರ) ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಮಾಡಿದ್ದಾರೆ.
ಗ್ರಾಮಸ್ಥರು ಎಷ್ಟೇ ಮನವೋಲಿಸಿದರು ಮೇಲೆ ಬರಲೊಪ್ಪದ ಬಾಬು, ಬಾವಿಯೊಳಗಿನ ನೀರೆತ್ತುವ ಮೋಟಾರನ ಕೇಬಲ ಹಿಡಿದುಕೊಂಡು ಜೋತು ಬಿದ್ದಿದ್ದನು. ಆಳವಾದ ನೀರಿನಲ್ಲಿ ಇಳಿಯುವುದಕ್ಕೆ ಯಾರೂ ಧೈರ್ಯ ಮಾಡಿರಲಿಲ್ಲ. ಕೊನೆಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದ ಎಚ್‌ಇಆರ್‌ಎಫ್ ತಂಡದ ಮುಖ್ಯಸ್ಥ ಬಸವರಾಜ ಹಿರೇಮಠ, ಬಾಬುವಿನ ಮನವೋಲಿಸಿ, ನೀರಿಗೆ ಜಿಗಿದು ತಕ್ಷಣವೇ ಆತನನ್ನು ಹಗ್ಗದಿಂದ ಕಟ್ಟಿಕೊಂಡು ಮೇಲಕ್ಕೆ ಕರೆದುಕೊಂಡು ಬಂದು ಜೀವ ಉಳಿಸಿದ್ದಾರೆ.

ಜೀವಂತ ವ್ಯಕ್ತಿಯ ರಕ್ಷಣೆ ಮಾಡಿದ್ದು ಇದೇ ಮೊದಲ ಸಲ. ಯಾವುದೇ ರಕ್ಷಣಾ ಸಾಧನ ಕಂಡರೂ ಆತ ನೀರಿಗೆ ಜಿಗಿಯುವ ಅಪಾಯವಿತ್ತು. ಹೀಗಾಗಿ ಹಗ್ಗ ಮಾತ್ರ ಕಟ್ಟಿಕೊಂಡು, ನಾನು ನಿನ್ನ ಜತೆ ಬರುವ ಎಂದು ಹೇಳುತ್ತ ಬಾವಿಗಿಳಿದಿದ್ದೆ. ಕೆಳಗೆ ಹೋದಾಗ, ನನನ್ನೆ ತಬ್ಬಿಕೊಂಡು ನೀರಿಗೆ ಜಿಗಿಯಲು ಮುಂದಾಗಿದ್ದ. ತಕ್ಷಣವೇ ಆತನಿಗೆ ಹಗ್ಗ ಕಟ್ಟಿ ಮೇಲಕ್ಕೆತ್ತಿಕೊಂಡು, ಉಳಿಸಿಕೊಂಡೆ. ಬಸವರಾಜ ಹಿರೇಮಠ, ಎಚ್‌ಇಆರ್‌ಎಫ್ ತಂಡದ ಮುಖ್ಯಸ್ಥ