ನಿಡಸೋಸಿ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಬಾಲಕನ ಜಡೆ ಕತ್ತರಿಸಿ ಮೂಢನಂಬಿಕೆ ವಿರುದ್ಧ ಅರಿವು ಮೂಡಿಸಿದ್ದಾರೆ. 
ಬೆಳಗಾವಿ

ಮೌಢ್ಯದ ಜಡೆಗೆ ನಿಡಸೋಸಿ ಜಗದ್ಗುರುಗಳಿಂದ ಮುಕ್ತಿ

ಸಂಕೇಶ್ವರ: ದೇವರ ಪವಾಡವೆಂದು ನಂಬಿ ಜಡೆ ಬಿಟ್ಟಿದ್ದ ಬಾಲಕನ ಕೂದಲು ಕತ್ತರಿಸಿ, ಮೌಢ್ಯದ ಸಂಕೋಲೆಯಿಂದ ಮುಕ್ತಿ ನೀಡಿ ಬಾಲಕನ ಬಾಳಿಗೆ ಹೊಸ ದಾರಿಯನ್ನು ನಿಡಸೋಸಿ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ತೋರಿದ್ದಾರೆ.
ಸಮೀಪದ ಬಾಡ ಗ್ರಾಮದ ವಿಶಾಲ ಸಾವ್ರತಕರ(14) ಬಾಲಕನ ಕೂದಲು ಗಂಟಿಕ್ಕಿಕೊಂಡು ಜಡೆ ರೂಪ ಪಡೆದಿತ್ತು. ದೇವರ ಪವಾಡವೆಂದು ನಂಬಿದ್ದ ಕುಟುಂಬಸ್ಥರು ಜಡೆ ಕತ್ತರಿಸಿದಲ್ಲಿ ಅಪಶಕುನ ಸಂಭವಿಸುತ್ತದೆ ಎಂಬ ಭಯದಿಂದ ಕಾಲ ಕಳೆಯುತ್ತ ಬಂದಿದ್ದರು. ಇದು ಬಾಲಕನ ಆರೋಗ್ಯ ಹಾಗೂ ಮಾನಸಿಕ ಭಾವನೆಗಳ ಮೇಲೆ ತೀವ್ರ ಪರಿಣಾಮ ಬೀರಿತ್ತು.
ಇದರಿಂದ ಬಾಲಕನ ವಿದ್ಯಾಭ್ಯಾಸ ಹಾಗೂ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗುತ್ತಿರುವುದನ್ನು ಅರಿತ ಶಿಕ್ಷಕರು ನಿಡಸೋಸಿ ಶ್ರೀಗಳ ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಶ್ರೀಗಳು ಪಾಲಕರನ್ನು ಶ್ರೀಮಠಕ್ಕೆ ಕರೆಸಿ ಸಮಾಲೋಚನೆ ನಡೆಸಿದರು. ಕೂದಲನ್ನು ಸರಿಯಾಗಿ ನಿರ್ವಹಿಸದ ಪರಿಣಾಮ ಉಂಟಾಗುವ ಜೈವಿಕ ಸ್ಥಿತಿಯೇ ಜಡೆ ಹೊರತು ಅದಕ್ಕೆ ಯಾವುದೇ ದೈವಿಕ ಶಕ್ತಿ, ಪವಾಡದ ಸಂಬಂಧವಿಲ್ಲ ಎಂದು ಮನವರಿಕೆ ಮಾಡಿದರು. ಬಳಿಕ ತಮ್ಮ ಸಮ್ಮುಖದಲ್ಲೇ ಜಡೆ ಕತ್ತರಿಸಿ, ಬಾಲಕನಲ್ಲಿ ಆತ್ಮವಿಶ್ವಾಸ ಮತ್ತು ವೈಚಾರಿಕ ಮನೋಭಾವ ಬೆಳೆಸಿದರು.
ಬಸವಣ್ಣನವರ ಕಾಯಕ, ದಾಸೋಹ ಹಾಗೂ ವೈಚಾರಿಕ ಸಿದ್ಧಾಂತಗಳನ್ನು ಜೀವನದಲ್ಲಿ ಅನುಷ್ಠಾನಗೊಳಿಸುತ್ತಿರುವ ನಿಡಸೋಸಿ ಶ್ರೀಗಳು ಸಾಮಾಜಿಕ ಸಂಸ್ಥೆಗಳ ಸಹಯೋಗದೊಂದಿಗೆ ಇದುವರೆಗೆ 4 ಸಾವಿರಕ್ಕೂ ಹೆಚ್ಚು ಜನರ ಜಡೆಗಳನ್ನು ತೆರವುಗೊಳಿಸಿ ಮೂಢನಂಬಿಕೆಯಿಂದ ಮುಕ್ತಿ ನೀಡಿದ್ದಾರೆ. ದೇವದಾಸಿ ಪದ್ಧತಿಯಿಂದ ಮಹಿಳೆಯರನ್ನು ಹೊರತಂದು ಪುನರ್ವಸತಿ ಕಲ್ಪಿಸುವುದು ಸೇರಿದಂತೆ ವಿಧವಾ ವಿವಾಹ, ಅಂತರ್ಜಾತಿ ವಿವಾಹ, ಸಂಬಂಧಿಕರ ಅನುವಂಶಿಕ ವಿವಾಹ ತಡೆ, ಜಾತ್ರೆಗಳಲ್ಲಿ ಪ್ರಾಣಿಬಲಿ, ಓಕುಳಿ ತಡೆ ಸೇರಿದಂತೆ ಅನೇಕ ಸಾಮಾಜಿಕ ಪಿಡುಗುಗಳ ವಿರುದ್ಧ ನಿರಂತರ ಜಾಗೃತಿ ಕೈಗೊಂಡಿರುವ ಶ್ರೀಗಳ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
"

ಬಾಡ ಗ್ರಾಮದ ಬಾಲಕನ ಆರೋಗ್ಯಕರ ಜೀವನಕ್ಕಾಗಿ ಜಡೆ ಕತ್ತರಿಸುವಂತೆ ಸಲಹೆ ನೀಡಲಾಗಿತ್ತು. ಅದರಂತೆ ಪಾಲಕರು ಶ್ರೀಮಠಕ್ಕೆ ಬಾಲಕನನ್ನು ಕರೆತಂದಿದ್ದರು. ಪಾಲಕರಲ್ಲಿ ತಿಳಿವಳಿಕೆ ಮೂಡಿಸಿ ಬಾಲಕನ ಜಡೆ ಕತ್ತರಿಸಿ ಮೂಢನಂಬಿಕೆಯಿಂದ ಹೊರತರಲಾಗಿದೆ.

— | ಡಾ.ಪಂಚಮ ಶಿವಲಿಂಗೇಶ್ವರ ಶ್ರೀ ಪೀಠಾಧಿಪತಿ, ನಿಡಸೋಸಿ ಮಠ