ನಿಪ್ಪಾಣಿಯ ವಿದ್ಯಾ ಸಂವರ್ಧಕ ಮಂಡಳದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯನ್ನು ಚಂದ್ರಕಾಂತ ಕೋಠಿವಾಲೆ, ಬಿ.ಎಸ್.ತಳವಾರ ಉದ್ಘಾಟಿಸಿದರು. ಸಂಜಯ ಶಿಂತ್ರೆ, ಸಮೀರ್ ಬಾಗೇವಾಡಿ ಇತರರಿದ್ದರು.
ನಿಪ್ಪಾಣಿ: ಶಿಕ್ಷಣ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ಶಿಕ್ಷಣಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಸಿಪಿಐ ಬಿ.ಎಸ್.ತಳವಾರ ಹೇಳಿದರು.
ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಸಿಬಿಎಸ್‌ಇ ಶಾಲೆಯ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಆತ್ಮವಿಶ್ವಾಸ, ಗುರಿ, ದೃಢ ನಿರ್ಧಾರದಿಂದ ಮುನ್ನುಗ್ಗಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಶ್ರದ್ಧೆ, ನಿಷ್ಠೆ ಹಾಗೂ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಬೇಕು ಎಂದರು.
ಸಂಚಾಲಕ ಸಂಜಯ ಶಿಂತ್ರೆ ಮಾತನಾಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದರು. ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಅಧ್ಯಕ್ಷತೆ ವಹಿಸಿದ್ದರು. ಸೇನಾಪಡೆಗೆ ಆಯ್ಕೆಗೊಂಡ ಪಪೂ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಲಕ್ಷ್ಮಣ ಗಾವಡೆ, ವಿಠ್ಠಲ ಕಟ್ಟಿಕರ, ಸಂದೇಶ ತೋರಸ್ಕರ, ಆಕಾಶ ಪಾಟೀಲ ಮತ್ತು ಸುಶಾಂತ ತೇಲಿ ಅವರನ್ನು ಸನ್ಮಾನಿಸಲಾತು.
ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ್ ಬಾಗೇವಾಡಿ, ಸಂಚಾಲಕ ಸಂಜಯ ಮೊಳವಾಡೆ, ಗಣೇಶ ಖಡೇದ, ಸಿಇಒ ಡಾ.ಸಿದ್ಧಗೌಡ ಪಾಟೀಲ, ಮುಖ್ಯ ಶಿಕ್ಷಕರಾದ ಆದಮ್‌ಅಲಿ ಪೀರಜಾದೆ, ಪ್ರಾಚಾರ್ಯ ಡಾ.ನಿಂಗಪ್ಪ ಮಾದಣ್ಣವರ, ಉಪನ್ಯಾಸಕ ಸಂಜಯ ಮುತ್ನಾಳೆ, ಗಜಾನನ ಕಮತೆ, ಯಲ್ಲಪ್ಪ ಹಂಡಿ, ದೀಪಕ ರಾನಮಳೆ ಇತರರಿದ್ದರು.