ಯಡೂರ ಶ್ರೀ ವೀರಭದ್ರ ದೇವರ ವಿಶಾಳಿ ಯಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರಕ್ಕೆ ದುರ್ಯೋಧನ ಐಹೊಳೆ ಚಾಲನೆ ನೀಡಿದರು. ಶ್ರೀಶೈಲ ಶ್ರೀ, ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಆರೋಗ್ಯದತ್ತ ಗಮನಹರಿಸಲಿ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ದುರ್ಯೋಧನ ಐಹೊಳೆ ಕರೆ
  • ಆರೋಗ್ಯ ತಪಾಸಣೆ ಉಚಿತ ಶಿಬಿರ
ಮಾಂಜರಿ: ಆರೋಗ್ಯಕ್ಕಿಂತ ಮೀಗಿಲಾದುದು ಬೇರೊಂದಿಲ್ಲ. ಜನರಿಗೆ ಆರೋಗ್ಯ ಸೇವೆ ನೀಡಬೇಕೆಂಬ ಉದ್ದೇಶದಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಅಭಿನಂದನಾರ್ಹ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಸಮೀಪದ ಯಡೂರ ಗ್ರಾಮದ ವೀರಭದ್ರ ದೇವರ ವಿಶಾಳಿ ಯಾತ್ರಾ ಮಹೋತ್ಸವ ಮಹಾರಥೋತ್ಸವ ಅಂಗವಾಗಿ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ನೇತೃತ್ವ ಹಾಗೂ ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಬಡವರು, ನಿರ್ಗತಿಕರು ಸರಿಯಾದ ಚಿಕಿತ್ಸೆ ಪಡೆಯದೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದನ್ನು ಗಮನಿಸಿ ಶ್ರೀಶೈಲ ಜಗದ್ಗುರುಗಳು ಪ್ರತಿಷ್ಠಿತ ಆಸ್ಪತ್ರೆಗಳನ್ನು ಒಂದೆಡೆ ಸೇರಿಸಿ ಎಲ್ಲ ರೋಗಗಳಿಗೂ ಚಿಕಿತ್ಸೆ, ವೈದ್ಯರಿಂದ ಸಮಾಲೋಚನೆ, ಅಗತ್ಯ ಪರಿಹಾರೋಪಾಯಗಳ ಕುರಿತು ಅರಿವು ಮೂಡಿಸುವ ಕಾರ್ಯ ಕೈಗೊಂಡಿರುವುದು ಅಭಿನಂದನಾರ್ಹ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಆರೋಗ್ಯ ಸಮಸ್ಯೆ ಕಾಣುತ್ತಿದ್ದೇವೆ. ಒತ್ತಡದ ಕೆಲಸ, ಕಲಬೆರಕೆ ಆಹಾರವೇ ಇದಕ್ಕೆ ಪ್ರಮುಖ ಕಾರಣ. ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಬೇಕು ಎಂದರು.
ಶ್ರೀಶೈಲ ಜಗದ್ಗುರು ಮಾತನಾಡಿ, ಕರೊನಾ ಅತಿವೃಷ್ಟಿಯಂತಹ ಸಂದರ್ಭದಲ್ಲೂ ಶ್ರೀ ಮಠದಿಂದ ಬಾಗಿಲಿಗೆ ತೆರಳಿ ಪರಿಹಾರ ಸಾಮಗ್ರಿ ವಿತರಿಸುವ ಮೂಲಕ ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸಿದೆ ಎಂದರು.
ಚಿಕ್ಕೋಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಽಕಾರಿ ಡಾ.ಎಸ್.ಎಸ್.ಗಡೆದ, ಡಾ.ಪದ್ಮಜಿತ ನಾಡಗೌಡ ಪಾಟೀಲ, ಪಿಎಸ್‌ಐ ನಂದೀಶ ಯಯತ್ತು ಇತರರಿದ್ದರು.