ಮೂಡಲಗಿ ಚೈತನ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅಪ್ರೆಂಟಿಸ್ ಮೇಳವನ್ನು ಗಣ್ಯರು ಉದ್ಘಾಟಿಸಿದರು. ಕೃಷ್ಣಾ ಮಾಲೋಜಿ, ಎಸ್.ಎಂ.ಕಮದಾಳ, ಎಸ್.ಬಿ.ಕುಳ್ಳೋಳಿ ಇತರರಿದ್ದರು 
ಬೆಳಗಾವಿ

ಅಗತ್ಯ ಕೌಶಲ ಬೆಳೆಸಿಕೊಳ್ಳಲಿ

ವಿದ್ಯಾ ಶೆಟ್ಟನಗೌಡ್ರ
ಮೂಡಲಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೈಗಾರಿಕೆಗಳ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಪೂರಕ ಕೌಶಲ ಬೆಳೆಸಿಕೊಳ್ಳುವುದು ಮುಖ್ಯ ಎಂದು ಬೆಳಗಾವಿ ಓರಿಯನ್ ಹೈಡ್ರಾಲಿಕ್ಸ್ ಕಂಪನಿ ತರಬೇತಿ ಅಧಿಕಾರಿ ಕೃಷ್ಣಾ ಮಾಲೋಜಿ ಹೇಳಿದರು.
ಶ್ರೀ ಚೈತನ್ಯ ಸೋಷಿಯಲ್ ವೇಲೇರ್ ಸೊಸೈಟಿಯ ಚೈತನ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೆಳಗಾವಿಯ ಓರಿಯನ್ ಹೈಡ್ರಾಲಿಕ್ಸ್ ಕಂಪನಿ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಪ್ರೆಂಟಿಸ್ ಮೇಳ, ಉದ್ಯಮ ಶೈಕ್ಷಣಿಕ ಸಹಭಾಗಿತ್ವ ಹಾಗೂ ಉದ್ಯೋಗ ಭರವಸೆ ಕುರಿತಾದ ತಿಳುವಳಿಕೆ ಒಪ್ಪಂದ ಸಮಾರಂಭದಲ್ಲಿ ಮಾತನಾಡಿದರು.
ಉದ್ಯಮ ಹಾಗೂ ಶೈಕ್ಷಣಿಕ ಸಂಸ್ಥೆಗಳ ಮಧ್ಯದ ಸಹಭಾಗಿತ್ವದಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ, ಗುಣಮಟ್ಟದ ತರಬೇತಿ ಹಾಗೂ ಉದ್ಯೋಗಾವಕಾಶ ಸುಲಭವಾಗಿ ದೊರೆಯಲಿವೆ. ಇಂತಹ ಅಪ್ರೆಂಟಿಸ್ ಮೇಳ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಆಡಳಿತಾಧಿಕಾರಿ ಎಸ್.ಎಂ.ಕಮದಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣದ ಜತೆಗೆ ಉದ್ಯೋಗಾಧಾರಿತ ತರಬೇತಿ ನೀಡುವ ನಿಟ್ಟಿನಲ್ಲಿ ಸಂಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಂಪನಿಯ ಅಧಿಕಾರಿ ಕದಂ ಮಾತನಾಡಿದರು. ಚೈತನ್ಯ ಐಟಿಐ ಮತ್ತು ಓರಿಯನ್ ಹೈಡ್ರಾಲಿಕ್ಸ್ ಕಂಪನಿ ಮಧ್ಯೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅಪ್ರೆಂಟಿಸ್ ಹಾಗೂ ಉದ್ಯೋಗ ನೇಮಕಾತಿಗಾಗಿ ಕಂಪನಿ ಎರಡನೇ ವರ್ಷದ ತರಬೇತಿದಾರರಿಂದ ಅರ್ಜಿ ಸ್ವೀಕರಿಸಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ಯಲಗೌಡ ಪಾಟೀಲ, ಚೈತನ್ಯ ಸೋಷಿಯಲ್ ವೇಲೇರ್ ಸೊಸೈಟಿ ಅಧ್ಯಕ್ಷ ಉದಯಕುಮಾರ ಜೋಕಿ, ಚೈತನ್ಯ ಅರ್ಬನ್ ಸೊಸೈಟಿ ಅಧ್ಯಕ್ಷ ತಮ್ಮಣ್ಣ ಕೆಂಚರಡ್ಡಿ, ವಿಜಯ ಹೊರಟ್ಟಿ, ಪ್ರಾಚಾರ್ಯ ಎಸ್.ಬಿ.ಕುಳ್ಳೋಳಿ, ಟಿ.ಆರ್.ಝಾರೆ ಇತರರಿದ್ದರು.