ತೆಲಸಂಗ ಗ್ರಾಮದಲ್ಲಿ ರೈತರು ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಸಿದರಾಯ ಭೋಸಗಿ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ತೆಲಸಂಗ: ಮೆಕ್ಕೆಜೋಳ ಖರೀದಿ ಕೇಂದ್ರ ಕೂಡಲೇ ಪ್ರಾರಂಭಿಸಬೇಕೆಂದು ಆಗ್ರಹಿಸಿ ಜೇವರ್ಗಿ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಚಾರ ತಡೆದು ರೈತರು ಪ್ರತಿಭಟಿಸಿದರು.
ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2,400 ರೂ. ದರದಲ್ಲಿ ಪ್ರತಿ ರೈತನಿಂದ ಗರಿಷ್ಠ 50 ಕ್ವಿಂಟಾಲ್ ಖರೀದಿಸಲು ಆದೇಶ ಹೊರಡಿಸಿದ್ದರೂ ಅಧಿಕಾರಿಗಳು ಮೆಕ್ಕೆಜೋಳ ಖರೀದಿಸುತ್ತಿಲ್ಲ ಎಂದು ಆರೋಪಿಸಿದರು.
ತಹಸೀಲ್ದಾರ್ ಸಿದರಾಯ ಭೋಸಗಿ ಹಾಗೂ ಎಪಿಎಂಸಿ ಅಧಿಕಾರಿಗಳು ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿದರು. ಶೀಘ್ರ ಖರೀದಿ ಕೇಂದ್ರ ತೆರೆಯುವುದಾಗಿ ಭರವಸೆ ನೀಡಿದರು. ಜ.8ರೊಳಗೆ ಖರೀದಿ ಕೇಂದ್ರ ಆರಂಭವಾಗದಿದ್ದರೆ ಮತ್ತೆ ಪ್ರತಿಭಟಿಸುವುದಾಗಿ ಗಡುವು ನೀಡಿದರು. ರಸ್ತೆ ಸಂಚಾರ ಬಂದ್ ಮಾಡಿದ್ದರಿಂದ ವಾಹನ ದಟ್ಟಣೆಯಾಯಿತು. ಶಶಿಕಾಂತ ಗುರೂಜಿ, ಸುಭಾಸ ಖೊಬ್ರಿ, ಹನುಮಂತ ಕೊಟ್ಟಲಗಿ ಇತರರಿದ್ದರು.