ಹುಕ್ಕೇರಿ ವಿದ್ಯುತ್ ಸಹಕಾರ ಸಂಘದಲ್ಲಿ ರೈತ ಮುಖಂಡರು ಪ್ರತಿಭಟನಾ ಮನವಿ ಓದಿದರು. ರೆಸಿಡೆಂಟ್ ಇಂಜಿನಿಯರ್ ನೇಮಿನಾಥ ಖೇಮಲಾಪುರೆ, ಜಿಯಾವುಲ್ಲ ವಂಟಮೂರಿ, ವಿಶ್ವನಾಥ ನಾಯಿಕ, ಮಹಾಂತೇಶ ಕಮತ, ಭೀಮಸೇನ ಬಾಗಿ, ಲಕ್ಷ್ಮೀ ಪೂಜೇರಿ ಇತರರಿದ್ದರು.
ಹುಕ್ಕೇರಿ: ವಿವಿಧ ಬೇಡಿಕೆಗೆ ಆಗ್ರಹಿಸಿ ಭಾರತೀಯ ಕೃಷಿಕ ಸಮುದಾಯದ ಸಂಘಟನೆ ಸದಸ್ಯರು ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಕಾರ್ಯಾಲಯ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ರಾಜ್ಯ ಅಧ್ಯಕ್ಷ ಗಣೇಶ ಈಳಗೇರ, ಉಪಾಧ್ಯಕ್ಷ ಜಿಯಾವುಲ್ಲ ವಂಟಮೂರಿ, ಮಹಾಂತೇಶ ಕಮತ, ವಕೀಲ ಭೀಮಸೇನ ಬಾಗಿ, ಲಕ್ಷ್ಮೀ ಪೂಜೇರಿ ಮಾತನಾಡಿ, ತಡರಾತ್ರಿ ವಿದ್ಯುತ್ ನೀಡುವುದರಿಂದ ಬೆಳೆಗೆ ನೀರುಣಿಸಲು ಪರದಾಡುವಂತಾಗಿದೆ. ವಿದ್ಯುತ್ ಕಂಬ ವಾಲಿದ್ದು, ಅನಾಹುತ ಸಂಭವಿಸುವ ಮುನ್ನ ಸರಿಪಡಿಸಬೇಕು. ವಿದ್ಯುತ್ ಪರಿವರ್ತಕಗಳ ಮೇಲೆ ಹೆಚ್ಚಿನ ಲೋಡ್ ಇದ್ದರೂ, ಅವುಗಳಿಗೆ ಪರ‌್ಯಾಯ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದರು.
ವಿದ್ಯುತ್ ಸಂಪರ್ಕಕ್ಕಾಗಿ ಸಂಘಕ್ಕೆ ಆಗಮಿಸುವ ಗ್ರಾಹಕರು ಮತ್ತು ರೈತರೊಂದಿಗೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರಮುಖವಾಗಿ ರೈತರಿಗೆ ಸತತ ಏಳು ತಾಸು ವಿದ್ಯುತ್ ಪೂರೈಸಬೇಕು. ಹೊಸ ಟಿಸಿ ಅಳವಡಿಸಬೇಕು. ತೋಟಪಟ್ಟಿ ನಿವಾಸಿಗಳಿಗೆ ನಿರಂತರ ಜ್ಯೋತಿ ಸಂಪರ್ಕ ಒದಗಿಸಬೇಕು. ಕಿತ್ತು ಬಿದ್ದ ತಂತಿ ಮತ್ತು ಕಂಬಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಬೇಡಿಕೆ ಇಟ್ಟರು.
ಸಂಘದ ರೆಸಿಡೆಂಟ್ ಇಂಜಿನಿಯರ್ ನೇಮಿನಾಥ ಖೇಮಲಾಪುರೆ ಮನವಿ ಸ್ವೀಕರಿಸಿ ಮಾತನಾಡಿ, ಕಣಗಲಾ, ಪಾಶ್ಚಾಪುರ, ಹೆಬ್ಬಾಳ ಮತ್ತು ಹುಕ್ಕೇರಿ ಪಟ್ಟಣ ಹೊರತು ಪಡಿಸಿ ಉಳಿದೆಡೆ ವಿದ್ಯುತ್ ಸಮಸ್ಯೆ ಆಗದಂತೆ ವಿದ್ಯುತ್ ಸರಬರಾಜು ಉಪಕೇಂದ್ರ ನಿರ್ಮಿಸಲಾಗಿದೆ. ಬೆಳವಿ, ನಿಡಸೋಸಿ, ಕಣಗಲಾ ಹಾಗೂ ಪಾಶ್ಚಾಪುರ ಗ್ರಾಮಗಳಲ್ಲಿ ಉಪಕೇಂದ್ರಗಳ ರಚನಾ ಕಾರ್ಯ ಪ್ರಗತಿಯಲ್ಲಿದೆ. ಅವುಗಳನ್ನು ಅಳವಡಿಸಿದ ನಂತರ ಸಮಸ್ಯೆ ಇರುವ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಆಗಲಿದೆ. ಸಂಘ ಯಾವಾಗಲೂ ರೈತ ಮತ್ತು ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ತಾಂತ್ರಿಕ ಸಮಸ್ಯೆ ಆದಾಗ ಮಾತ್ರ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಆಗುತ್ತದೆ. ರೈತರು ಸಹಕರಿಸಬೇಕೆಂದು ವಿನಂತಿಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ವಿಶ್ವನಾಥ ನಾಯಿಕ, ರೈತ ಮುಖಂಡರಾದ ಅಲಗೌಡ ಪಾಟೀಲ, ರಾಮಪ್ಪ ವಾಸೇದಾರ, ಗುರುಸಿದ್ದ ಬಾಗಿ, ಸಿದ್ದಪ್ಪ ಭಂಡಾರಿ, ಎಂ.ಎಸ್.ಕೋಟಿವಾಲೆ, ಎ.ಎಸ್.ಸಂಕನ್ನವರ ಇತರರಿದ್ದರು.