ಗೋಕಾಕ ನಗರದ ಕೆಎಲ್‌ಇ ಐಟಿಐ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಪ್ರಕಾಶ ತುಳಜನ್ನವರ, ಎಂ.ಡಿ.ಚುನಮರಿ, ಜಿ.ಎಂ.ಅಂದಾನಿ ಇತರರು ಇದ್ದರು.
ಗೋಕಾಕ: ಇಂದಿನ ತಾಂತ್ರಿಕ ಯುಗದಲ್ಲಿ ತಮ್ಮಲ್ಲಿರುವ ಕೌಶಲ ವದ್ಧಿಸಿಕೊಂಡು ಪ್ರತಿಭಾನ್ವಿತರಾಗಿ ಎಂದು ರಾಯಚೂರಿನ ಕೆಪಿಸಿಎಲ್ ಸಹಾಯಕ ಅಭಿಯಂತ ಪ್ರಕಾಶ ತುಳಜನ್ನವರ ಹೇಳಿದರು.
ಕೆಎಲ್‌ಇ ಐಟಿಐ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿಭಾನ್ವಿತರಿಗೆ ಹೆಚ್ಚಿನ ಉದ್ಯೋಗವಕಾಶಗಳಿವೆ. ಪರಿಶ್ರಮದಿಂದ ಪ್ರಯತ್ನಶೀಲರಾದರೆ ಯಶಸ್ಸು ನಿಶ್ಚಿತ. ವತ್ತಿಪರ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸ್ವಯಂ ಉದ್ಯೋಗದೊಂದಿಗೆ ಇತರ ಕ್ಷೇತ್ರದಲ್ಲೂ ಉದ್ಯೋಗ ದೊರೆಯುತ್ತವೆ. ಪ್ರತಿಭೆ ಸದುಪಯೋಗದಿಂದ ಬದುಕು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಚಾರ್ಯ ಮಂಜುನಾಥ ಕಂಬಾರ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ದೊರೆಯುತ್ತಿವೆ. ಇಂದು ವಿವಿಧ ಸಂಸ್ಥೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ನೀಡಲಾಗುತ್ತಿದೆ ಎಂದರು. ಸ್ಥಳೀಯ ಕೆಎಲ್‌ಇ ಆಡಳಿತ ಮಂಡಳಿ ಅಧ್ಯಕ್ಷ ಎಂ.ಡಿ.ಚುನಮರಿ, ಆಡಳಿತಾಧಿಕಾರಿ ಜಿ.ಎಂ.ಅಂದಾನಿ, ಪ್ರೇಮಾ ಎಂ.ಎಸ್., ಇದ್ದರು. ಕೆ.ವಿ.ಕುಲಕರ್ಣಿ ಸ್ವಾಗತಿಸಿದರು.