ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಟ್ರಾೃಕ್ಟರ್ ಚಾಲಕರಿಗೆ ಸೌಂಡ್ ಸಿಸ್ಟಮ್ ಮತ್ತು ಸಂಚಾರ ನಿಯಮಗಳ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿರುವುದು. 
ಬೆಳಗಾವಿ

ಮೆಟ್ರೋ ಮಾದರಿ ಬೆಳಗಾವಿಗೂ ಬರಲಿ

ಬೆಳಗಾವಿ: ಬೆಂಗಳೂರು ಮೆಟ್ರೋದಲ್ಲಿ ಮೊಬೈಲ್ ಶಬ್ದ ಹೆಚ್ಚಿಗೆ ಇಟ್ಟು ಹಾಡು ಕೇಳುವವರು, ರೀಲ್ಸ್ ಮಾಡುವವರ ವಿರುದ್ಧ ದಂಡ ಪ್ರಯೋಗ ಮಾಡುತ್ತಿರುವ ಕ್ರಮ, ಉತ್ತರ ಕರ್ನಾಟಕ ಭಾಗದ ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ಟಂಟಂ, ಮಿನಿಬಸ್ ಮತ್ತು ಟ್ರಾೃಕ್ಟರ್‌ಗಳಿಗೂ ಅನ್ವಯವಾಗಲಿ ಎನ್ನುವ ಆಗ್ರಹ ಕೇಳಿ ಬಂದಿದೆ.
ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಅಶ್ಲೀಲ ಜಾನಪದ ಹಾಡು, ಸಿನಿಮಾ ಹಾಡುಗಳನ್ನು ಅನೇಕರು ಇಯರ್ ಫೋನ್ ಬಳಸದೆಯೇ ಹೆಚ್ಚು ಸೌಂಡ್ ಇಟ್ಟು ಕೇಳುತ್ತಿದ್ದು, ಇದು ಇತರ ಪ್ರಯಾಣಿಕರಿಗೆ ಕಿರಿಕಿರಿ ಮಾಡುತ್ತಿದೆ. ಇದನ್ನು ಪ್ರಶ್ನಿಸಲು ಹೋಗಿ ಜಗಳವಾದ ಉದಾಹರಣೆಗಳು ಸಾಕಷ್ಟಿವೆ.ಈಚೆಗೆ ಬಸ್ಸಿನಲ್ಲೇ ರೀಲ್ಸ್ ಮಾಡುವವರ ಸಂಖ್ಯೆಯೂ ಹೆಚ್ಚಿದ್ದು ಇನ್ನುಳಿದವರು ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕಾಗಿದೆ. ಹೀಗಾಗಿ ಮೆಟ್ರೋ ಮಾದರಿಯಲ್ಲೇ ಬೆಳಗಾವಿಯಲ್ಲೂ ಪ್ರಕರಣ ದಾಖಲಿಸಿ ದಂಡ ಹಾಕುವಂತಾಗಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಈಗಾಗಲೇ ದಂದ್ವಾರ್ಥದ ಜಾನಪದ ಗೀತೆಗಳಿಂದ ನೈಜ ಜಾನಪದ ಸೊಗಡು ಹಾಳಾಗಿ ಹೋಗಿದೆ. ಇದರ ವಿರುದ್ಧವೂ ಕಳೆದ ಎರಡು ವಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಶುರುವಾಗಿದೆ. ಈ ಹೊತ್ತಿನಲ್ಲೇ ಮೆಟ್ರೋ ದಂಡ ಪ್ರಯೋಗ ಆರಂಭಿಸಿದ್ದು, ಈ ಭಾಗದ ಬಸ್‌ಗಳಲ್ಲಿ ಕಿರಿಕಿರಿ ಮಾಡುವ ಮೊಬೈಲ್ ಮತ್ತಿತರ ಸೌಂಡಗಳಿಗೂ ಕಡಿವಾಣ ಹಾಕಬೇಕು ಎಂಬ ಆಗ್ರಹ ಕೇಳುತ್ತಿದೆ.
ನಿದ್ದೆ ಹಾಳು: ಕಬ್ಬು ನುರಿಸುವ ಹಂಗಾಮು ಶುರುವಾದಾಗಿನಿಂದ ಅನೇಕ ಹಳ್ಳಿ, ಪಟ್ಟಣಗಳ ಜನರ ನಿದ್ದೆಯೇ ಹಾಳಾಗಿದೆ. ರಾತ್ರಿ ಹೊತ್ತಿನಲ್ಲೇ ಹೆಚ್ಚಾಗಿ ಕಬ್ಬಿನ ಟ್ರಾೃಕ್ಟರ್‌ಗಳು ಓಡಾಡುತ್ತಿದ್ದು, ಇವುಗಳ ಸೌಂಡ್ ಸಿಸ್ಟಮ್‌ದಿಂದ ಜನ ನಿದ್ದೆ ಮಾಡುತ್ತಿಲ್ಲ. ವಿದ್ಯಾರ್ಥಿಗಳು ನೆಮ್ಮದಿಯಿಂದ ಓದುವುದಕ್ಕೂ ಆಗುತ್ತಿಲ್ಲ. ಎಷ್ಟೋ ಟ್ರ್ಯಾಕ್ಟರ್‌ನವರು 50 ಸಾವಿರದಿಂದ 1 ಲಕ್ಷ ರೂ. ಖರ್ಚು ಮಾಡಿ, ಡಾಲ್ಬಿ ಮಾದರಿಯ ಸೌಂಡ್ ಸಿಸ್ಟಮ್ ಅಳವಡಿಸಿದ್ದಾರೆ.
ರಾತ್ರಿ ಹೊತ್ತು ಚಾಲಕ ನಿದ್ದೆ ಮಾಡದಂತಿರಲು ಸಂಗೀತ ಬೇಕು. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ರೂಢಿ. ಆದರೆ ಈಚೆಗೆ ಇದು ಅತಿಯಾಗಿ, ಜನರ ನೆಮ್ಮದಿಯನ್ನೇ ಹಾಳು ಮಾಡುತ್ತಿದೆ. ಜತೆಗೆ ಅಪಘಾತಗಳಿಗೂ ಕಾರಣವಾಗುತ್ತಿದೆ.
ಇದೇ ರೀತಿ ಅನೇಕ ಆಟೋ, ಟಂಟಂಗಳಲ್ಲೂ ಅತಿಯಾದ ಸದ್ದು ಮಾಡುವ ಧ್ವನಿವರ್ಧಕ ಅಳವಡಿಸಿದ್ದಾರೆ.
ಇದನ್ನೆಲ್ಲ ಸಹಿಸಿಕೊಂಡು ಹೋಗುತ್ತಿರುವ ಜನ ಇದಕ್ಕೆ ಕಡಿವಾಣ ಹಾಕಲು ದಂಡ ಪ್ರಯೋಗ ಆರಂಭಿಸಿ ವ್ಯವಸ್ಥೆ ಕಾಪಾಡಿ ಎನ್ನುತ್ತಿದ್ದಾರೆ. ಸಂಬಂಧಿತರು ಸ್ಪಂದಿಸಬೇಕಿದೆ.
"

ಟ್ರಾೃಕ್ಟರ್ ಸೌಂಡ್ ಸಿಸ್ಟಮ್ ಅಳವಡಿಕೆಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಬ್ಬಿನ ಹಂಗಾಮು ಆರಂಭಗೊಂಡಾಗಿನಿಂದ ಈವರೆಗೆ 332 ಸೌಂಡ್ ಸಿಸ್ಟಮ್ ವಶಪಡಿಸಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಒಟ್ಟು 888 ಜಾಗೃತಿ ಅಭಿಯಾನ ಮಾಡಿ, ಚಾಲಕರಿಗೆ ತಿಳಿ ಹೇಳಿದ್ದೇವೆ. ಸಾರ್ವಜನಿಕರಿಗೆ ಸೌಂಡ್ ಸಿಸ್ಟಮ್‌ಗಳಿಂದ ತೊಂದರೆಯಾಗದಂತೆ ಕಠಿಣ ಕ್ರಮ ಕೈಗೊಳ್ಳಲು ಎಲ್ಲ ಠಾಣೆಗಳಿಗೂ ಸೂಚಿಸಿದ್ದೇವೆ.

| ಡಿ.ವಿ.ಕಮ್ಮಾರ ಬೆಳಗಾವಿ