ಬೈಲಹೊಂಗಲದಲ್ಲಿ ರೈತ ಮುಖಂಡರ ಮತ್ತು ಅಧಿಕಾರಿಗಳ ಸಭೆ ಜರುಗಿತು. ಶಾಸಕ ಮಹಾಂತೇಶ ಕೌಜಲಗಿ, ಎಸಿ ಪ್ರವೀಣ ಜೈನ್ ಇತರರು ಇದ್ದರು. 
ಬೆಳಗಾವಿ

ರೈತರಿಗೆ ವಿಮೆ ಕಂಪನಿ ನೆರವಾಗಲಿ

ಬೈಲಹೊಂಗಲ: ಬೆಳೆ ಹಾನಿಯಾದರೆ ಪರಿಹಾರ ಸಿಗುವುದೆಂಬ ಮಹಾದಾಸೆಯಿಂದ ರೈತರು ವಿಮೆ ಮಾಡಿಸುತ್ತಾರೆ. ಬೆಳೆ ಹಾನಿಯಾದ ಸಂದರ್ಭದಲ್ಲಿ ವಿಮೆ ಕಂಪನಿ ರೈತರಿಗೆ ಬೆಳೆ ವಿಮೆ ಹಣ ಕೊಡಬೇಕು. ಒಂದು ವೇಳೆ ರೈತರ ನ್ಯಾಯಯುತ ಪರಿಹಾರ ನೀಡಲು ಅನ್ಯಾಯ ಮಾಡಿದರೆ, ಅಂಥ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಿ, ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಎಚ್ಚರಿಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಗುರುವಾರ ರೈತ ಮುಖಂಡರ ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರೈತರ ಹಿತ ಕಾಪಾಡುವುದು ವಿಮೆ ಕಂಪನಿಗಳ ಆದ್ಯ ಕರ್ತವ್ಯವಾಗಿದೆ ಎಂದರು. ಉಪವಿಭಾಗಾಧಿಕಾರಿ ಪ್ರವೀಣ ಜೈನ್ ಮಾತನಾಡಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಲು, ಸಮರ್ಪಕವಾಗಿ ಬೀಜ, ಗೊಬ್ಬರ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ರೈತ ಮುಖಂಡರಾದ ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ಕಮತ, ಶಿವಾನಂದ ಇಂಚಲ, ಬೀರಪ್ಪ ದೇಶನೂರ ಮಾತನಾಡಿ, ವಿಮೆ ಕಂಪನಿಗಳು ರೈತರಿಗೆ ಅನ್ಯಾಯ ಮಾಡುತ್ತಿವೆ. ಹೀಗೆಯೇ ಮುಂದುವರಿದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ತಹಸೀಲ್ದಾರ್ ಹನುಮಂತ ಶಿರಹಟ್ಟಿ, ಕೃಷಿ ಇಲಾಖೆ ಅಧಿಕಾರಿಗಳು, ವಿಮೆ ಕಂಪನಿಯ ಅಧಿಕಾರಿಗಳು, ರೈತ ಸಂಘಟನೆಗಳ ಮುಖಂಡರು ಇತರರಿದ್ದರು.