ಬೆಳಗಾವಿಯ ವಿಟಿಯುದಲ್ಲಿ ಆರಂಭಗೊಂಡ ನೂತನ ಕೇಂದ್ರವನ್ನು ಪ್ರೊ.ಟಿ.ಜಿ.ಸೀತಾರಾಂ, ಪ್ರೊ.ಎಸ್.ವಿದ್ಯಾಶಂಕರ್, ಅರುಣ ಕುಮಾರ, ಪ್ರೊ.ವಿ.ಕೇಶವಮೂರ್ತಿ, ಪ್ರೊ.ಪ್ರಸಾದ ರಾಂಪುರೆ, ಪ್ರೊ.ಯು.ಜೆ.ಉಜ್ವಲ್ ಇತರರು ವೀಕ್ಷಿಸಿದರು. 
ಬೆಳಗಾವಿ

ಜೆನ್‌ಜೀಗಳು ಆಂದೋಲನಗಳನ್ನು ಕೈಬಿಟ್ಟು ಕೌಶಲ ಕಲಿಯಲಿ

ಬೆಳಗಾವಿ : ಇಡೀ ಜಗತ್ತು ನವಭಾರತದ ಜೆನ್‌ಜೀಗಳತ್ತ ನೋಡುತ್ತಿದೆ. ಹೀಗಾಗಿ, ಯುವಸಮೂಹಕ್ಕೆ ಕೌಶಲ ಆಧಾರಿತ ಅವಕಾಶ ಸೃಷ್ಟಿಸುವ ಕೆಲಸವಾಗಬೇಕಿದೆ. ಇದಕ್ಕೆ ಪೂರಕವಾಗಿ ದೇಶದ ವಿದ್ಯಾರ್ಥಿಗಳು ಆಂದೋಲನಗಳಲ್ಲಿ ತೊಡಗಿಕೊಳ್ಳದೇ ಕೌಶಲ ಆಧಾರಿತ ಪರಿಣತಿ ಕಲಿಯಬೇಕಿದೆ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(ಎಐಸಿಟಿಇ) ಮಾಜಿ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಂ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶವು ಐ ವ್ಯಾಲ್ಯೂ, ಎಐಸಿಟಿಇ ಸಹಯೋಗದಲ್ಲಿ ಆರಂಭಿಸಿದ ರಿವರ್ಸ್ ಇಂಜಿನಿಯರಿಂಗ್ ಮತ್ತು ಎಐಸಿಟಿಇ ಐಡಿಯಾ ಲ್ಯಾಬ್ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಇಂಜಿನಿಯರಿಂಗ್ ಪದವಿ ಮತ್ತು ಪ್ರಮಾಣ ಪತ್ರಕ್ಕೆ ಯಾವುದೇ ಮೌಲ್ಯವಿರುವುದಿಲ್ಲ. ತಂತ್ರಜ್ಞಾನಗಳ ಪರಿಣತಿ ಮತ್ತು ಕೌಶಲಕ್ಕೆ ಹೆಚ್ಚಿನ ಬೆಲೆ ಸಿಗಲಿದೆ ಎಂದರು.
ದೇಶದಲ್ಲಿ ಸುಮಾರು 8 ಕೋಟಿ ಸಣ್ಣ ಮತ್ತು ಮಧ್ಯಮ(ಎಂಎಸ್‌ಎಂಇ) ಕೈಗಾರಿಕೆಗಳಿವೆ. ಒಬ್ಬೊಬ್ಬ ಅಭ್ಯರ್ಥಿ ಎಂದು ಲೆಕ್ಕ ಹಾಕಿದರೂ 8 ಕೋಟಿ ಬೇಕು. ಅಷ್ಟು ಪ್ರಮಾಣದಲ್ಲಿ ಕೌಶಲ ಹೊಂದಿದ ಇಂಜಿನಿಯರ್ ವಿದ್ಯಾರ್ಥಿಗಳೆ ನಮ್ಮಲ್ಲಿ ಇಲ್ಲ. ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಶೇ.20ರಷ್ಟು ಮಾತ್ರ ತಾಂತ್ರಿಕ ಶಿಕ್ಷಣದಲ್ಲಿದ್ದಾರೆ. ಆದರೆ, ಅನೇಕರು ಇಂಜಿನಿಯರಿಂಗ್ ಕಾಲೇಜ್ ಸಂಖ್ಯೆ ಮತ್ತು ಪ್ರವೇಶ ಸೀಟುಗಳ ಪ್ರಮಾಣ ಹೆಚ್ಚಾಯಿತು ಎಂದು ಮಾತನಾಡಿಕೊಳ್ಳುತ್ತಾರೆ ಇದು ತಪ್ಪು. ನಮ್ಮ ದೇಶದಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ಇಂಜಿನಿಯರ್ ಪದವೀಧರರ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡುವ ಉದ್ದೇಶದಿಂದ ಹೊಸ ಕೇಂದ್ರ ಆರಂಭಿಸಿದ್ದೇವೆ. ದಿನದ 24 ಗಂಟೆಯೂ ಲ್ಯಾಬ್ ತೆರೆಯಲಿದ್ದು, ವಿದ್ಯಾರ್ಥಿಗಳು ತಮಗೆ ಅನುಕೂಲವಾಗುವ ವೇಳೆಯಲ್ಲಿ ಆಗಮಿಸಿ ಅಧ್ಯಯನ ಮಾಡಬಹುದಾಗಿದೆ. 3ಡಿ ಪ್ರಿಟಿಂಗ್ ಮಿಷನ್, ಡಿಸೈನಿಂಗ್, ನವ ತಂತ್ರಜ್ಞಾನವನ್ನು ಒಳಗೊಂಡಿದೆ. ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಇದರಲ್ಲಿ ಕಲಿಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ವಿಟಿಯು ಕಾರ್ಯಕಾರಿ ಪರಿಷತ್ ಸದಸ್ಯ ಪ್ರೊ.ವಿ.ಕೇಶವಮೂರ್ತಿ, ಐ ವ್ಯಾಲ್ಯೂ ಸಿಟಿಒ ಅರುಣಕುಮಾರ, ಆಡಳಿತ ವಿಭಾಗದ ಕುಲಸಚಿವ ಪ್ರೊ.ಪ್ರಸಾದ ರಾಂಪುರೆ, ಮೌಲ್ಯಮಾಪನ ಕುಲಸಚಿವ ಪ್ರೊ.ಯು.ಜೆ.ಉಜ್ವಲ್, ವಿತ್ತಾಧಿಕಾರಿ ಡಾ.ಜಿ.ಪ್ರಶಾಂತ ನಾಯಕ, ಅಭಿವೃದ್ಧಿ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಕೆ.ಎನ್.ಭರತ ಇತರರಿದ್ದರು.