ಹುಕ್ಕೇರಿಯ ಕೋರ್ಟ್ ವೃತ್ತದಲ್ಲಿ ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ತಡೆದು ರೈತರು ಪ್ರತಿಭಟನೆ ನಡೆಸಿದರು. ರಾಮಚಂದ್ರ ಜೋಶಿ, ಗೋಪಾಲ ಮರಬಸ್ಸನವರ, ಪ್ರಭು ವಂಟಮೂರಿ, ತಮ್ಮನಗೌಡ ಪಾಟೀಲ, ಅಮರೇಶ ಬನ್ನಕ್ಕಗೋಳ ಮತ್ತಿತರರಿದ್ದರು.
- ರಾಮಚಂದ್ರ ಜೋಶಿ ಆಗ್ರಹ
- ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ತಡೆದು ಧರಣಿ
ಹುಕ್ಕೇರಿ: ರೈತರ ಬೇಡಿಕೆಗೆ ಸ್ಪಂದಿಸದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಧೋರಣೆ ರೈತರಲ್ಲಿ ಆಕ್ರೋಶ ಹೆಚ್ಚಿಸುತ್ತಿದೆ. ವರ್ಷವಿಡಿ ಸಾಲ ಮಾಡಿ ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ನೀಡುವಂತೆ ಹಗಲಿರುಳು ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲವೆಂದು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಮಚಂದ್ರ ಜೋಶಿ ಆರೋಪಿಸಿದರು.
ತಾಲೂಕಿನ ಕೋರ್ಟ್ ವೃತ್ತದಲ್ಲಿ ಮಹಾರಾಷ್ಟ್ರ ರಾಜ್ಯದ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ತಡೆದು ಪ್ರತಿಭಟಿಸುತ್ತಿದ್ದ ಹೋರಾಟಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಮಹಾರಾಷ್ಟ್ರದಲ್ಲಿ ಶೇತ್ಕರಿ ಸಂಘಟನೆಯಿಂದ ಅಲ್ಲಿನ ರೈತರು ಪ್ರತಿ ಟನ್‌ಗೆ ೩,೭೦೦ ರೂ. ದರ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕದ ರೈತರು ಹಲವಾರು ದಿನಗಳಿಂದ ಪ್ರತಿ ಟನ್‌ಗೆ ೩,೫೫೦ ರೂ. ಬೆಲೆ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಇಬ್ಬರು ಸಚಿವರು ಮತ್ತು ಶಾಸಕರ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳಿವೆ. ಅದರಿಂದ ರೈತರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸ್ಪಂದಿಸಿಲ್ಲ ಇದೇ ರೀತಿ ಅವರ ಮೊಂಡಾಟ ನಡೆಸಿದರೆ ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಸಂಪೂರ್ಣ ವಾಹನ ಸಂಚಾರ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದರು.
ರೈತ ಸಂಘಟನೆ ಅಧ್ಯಕ್ಷ ಗೋಪಾಲ ಮರಬಸ್ಸನವರ, ಮುಖಂಡರಾದ ತಮ್ಮನಗೌಡ ಪಾಟೀಲ, ಪ್ರಭು ವಂಟಮುರಿ, ಅಮರೇಶ ಬನ್ನಕ್ಕಗೋಳ ಇತರರಿದ್ದರು.