ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿದಾನಂದ ಸವದಿ ಅವರನ್ನು ಸನ್ಮಾನಿಸಲಾಯಿತು. ಡಾ.ಬಾಳಾಸಾಹೇಬ ಲೋಕಾಪುರ, ಶ್ಯಾಮರಾವ್ ಪೂಜಾರಿ, ಡಾ.ಪ್ರಭಾಕರ ಖ್ಯಾಡಿ ಇತರರಿದ್ದರು. 
ಬೆಳಗಾವಿ

ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯಲಿ

ಅಥಣಿ ಗ್ರಾಮೀಣ: ವಿದ್ಯಾರ್ಥಿಗಳಲ್ಲಿ ಪ್ರತಿಭೆ, ನಾಯಕತ್ವ ಗುಣ, ಶಿಸ್ತು, ಸೇವಾ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವಲ್ಲಿ ಪಠ್ಯೇತರ ಚಟುವಟಿಕೆಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್, ರೆಡ್‌ಕ್ರಾಸ್ ಹಾಗೂ ವಿವಿಧ ಚಟುವಟಿಕೆ ಮತ್ತು ಪ್ರಥಮ ವರ್ಷದ ಬಿಎ, ಬಿಕಾಂ, ಬಿಎಸ್‌ಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯುವಜನರಲ್ಲಿ ಸೇವಾ ಮನೋಭಾವ ಮತ್ತು ದೇಶಾಭಿಮಾನ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್-ರೇಂಜರ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಸಮಸ್ಯೆ ಅರಿತುಕೊಂಡು ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಮತ್ತು ಕೆಪಿಸಿಸಿ ಸದಸ್ಯ ಶ್ಯಾಮರಾವ್ ಪೂಜಾರಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಪ್ರತಿಭಾ ಪ್ರದರ್ಶನ ಜರುಗಿದವು.
ಮುಖ್ಯಶಿಕ್ಷಕ ಡಾ.ಪ್ರಭಾಕರ ಖ್ಯಾಡಿ, ಡಾ.ಮಹಾದೇವ ಉಕ್ಕಲಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರಕಾಂತ ಶರಣ, ಸುರೇಶ ಪೂಜಾರಿ, ರಸೂಲ್ ಕಾಳೆ, ಸದಾಶಿವ ಮುದಕಣ್ಣವರ, ಪ್ರೊ.ಎನ್.ಎಲ್.ದಯಾನಂದ, ಪಲ್ಲವಿ ಎಂ.ಎಂ., ವಿನೋದಕುಮಾರ ಮೇತ್ರಿ, ಅಬ್ದುಲ್‌ಗನಿ ಮುಲ್ಲಾ, ಅಕ್ಷತಾ ಕುರಣಿ, ರಾಮಕುಮಾರ ಅವಟಿ ಇತರರಿದ್ದರು. ಶ್ರೀಕಾಂತ ಜಾಧವ ಸ್ವಾಗತಿಸಿದರು. ಮೇಘಾ ಗಿರಿಗೌಡ ನಿರೂಪಿಸಿದರು. ಡಾ.ವಿದ್ಯಾಶ್ರೀ ಕೋಲಕಾರ ವಂದಿಸಿದರು.