ಬೆಳಗಾವಿಯಲ್ಲಿ ಸೋಮವಾರ ಜರುಗಿದ ವಿಕೆ ದಂತ ವಿಜ್ಞಾನ ಮಹಾವಿದ್ಯಾಲಯದ 40ನೇ ವರ್ಷಾಚರಣೆಯ ಹಳೇ ವಿದ್ಯಾರ್ಥಿಗಳ ಸಭೆಯಲ್ಲಿ ಡಾ.ಪ್ರಭಾಕರ ಕೋರೆ, ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ.ಅಲ್ಕಾ ಕಾಳೆ, ಡಾ.ವೈಶಾಲಿ ಕೇಳುಸ್ಕರ ಇತರರು ಇದ್ದರು.
ಬೆಳಗಾವಿ: ವಿದ್ಯಾರ್ಥಿಗಳು ಕಲಿಯುವ ಸಂದರ್ಭದಲ್ಲಿ ತಾವು ಪಡೆಯುವ ಜ್ಞಾನ ಮತ್ತು ಕೌಶಲಗಳನ್ನು ಮನುಕುಲದ ಸುಧಾರಣೆಗಾಗಿ ಬಳಸಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಕಾಹೆರ್ ಕುಲಾಧಿಪತಿ ಡಾ.ಪ್ರಭಾಕರ ಕೋರೆ ಹೇಳಿದರು.
ನಗರದ ಕೆಎಲ್‌ಇ ವಿಕೆ ದಂತ ವಿಜ್ಞಾನ ಮಹಾವಿದ್ಯಾಲಯಕ್ಕೆ 40 ವರ್ಷ ಪೂರೈಸಿರುವ ಹಿನ್ನೆಲೆ ಮಾಣಿಕ್ಯ ವರ್ಷಾಚರಣೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಪಿಜಿ ವಿಭಾಗದ ಹಳೇ ವಿದ್ಯಾರ್ಥಿಗಳ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾನು 1985ರಲ್ಲಿ ಕೆಎಲ್‌ಇ ಸೊಸೈಟಿ ಅಧ್ಯಕ್ಷರಾಗಿ ಪ್ರಾರಂಭಿಸಿದ ಮೊದಲ ಸಂಸ್ಥೆಗಳಲ್ಲಿ ಕೆಎಲ್‌ಇ ದಂತ ಮಹಾವಿದ್ಯಾಲಯವೂ ಒಂದು. ಇವತ್ತು ಇಷ್ಟೊಂದು ಪ್ರಗತಿ ಸಾಧಿಸಿರುವುದು ನಮಗೆ ಹೆಮ್ಮೆ ಇದೆ. ಇಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲವನ್ನು ಮನುಕುಲದ ಒಳಿತಿಗಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಕಾಹೆರ್ ಕುಲಪತಿ ಡಾ.ಎನ್.ಎಸ್.ಮಹಾಂತಶೆಟ್ಟಿ ಮಾತನಾಡಿ, ಈ ದಂತ ಮಹಾವಿದ್ಯಾಲಯವು ಇಷ್ಟು ವರ್ಷಗಳ ಅವಧಿಯಲ್ಲಿ ಅನೇಕ ಮೈಲಿಗಲ್ಲು ಸಾಧಿಸಿ ಪ್ರಗತಿ ಪಥದಲ್ಲಿದೆ. ಇದಕ್ಕೆ ಹಿಂದಿನ ಹಾಗೂ ಇಂದಿನ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದರು.
ಭಾರತ ಹಾಗೂ ವಿದೇಶಗಳಿಂದ ಆಗಮಿಸಿದ್ದ 260ಕ್ಕೂ ಹೆಚ್ಚು ಪಿಜಿ ವಿಭಾಗದ ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಾಚಾರ್ಯೆ ಡಾ.ಅಲ್ಕಾ ಕಾಳೆ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ವೈಶಾಲಿ ಕೇಳುಸ್ಕರ ವಂದಿಸಿದರು.