ಅಥಣಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. 
ಬೆಳಗಾವಿ

ಸಮಸ್ಯೆ ಪರಿಹರಿಸುವ ಕಾರ್ಯವಾಗಲಿ

ವಿದ್ಯಾ ಶೆಟ್ಟನಗೌಡ್ರ
ಅಥಣಿ: ಬಡವರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಬೇಕು. ಸರ್ಕಾರಿ ಅಧಿಕಾರಿಗಳು ಈ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.
ಪಟ್ಟಣದ ತಾಲೂಕು ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿ, ಆಸ್ಪತ್ರೆಯಲ್ಲಿ ನೀರು, ಶೌಚಗೃಹ ಸೌಲಭ್ಯ ಸಮರ್ಪಕವಾಗಿಲ್ಲ. ಅಗತ್ಯಕ್ಕೆ ತಕ್ಕಷ್ಟು ಔಷಧವೂ ದೊರೆಯುತ್ತಿಲ್ಲ. ಹೆರಿಗೆ ವಾರ್ಡ್ನಲ್ಲಿ ಉತ್ತಮ ಸೌಲಭ್ಯವಿದ್ದು, ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ. ಕೊರತೆಯಿರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿ ಜನರಿಗೆ ಉತ್ತಮ ಸೇವೆ ಒದಗಿಸಬೇಕು ಎಂದರು.
ಜನರು ಸಮಸ್ಯೆಯಿಂದ ಠಾಣೆಗೆ ಬಂದಾಗ ಅವರ ದೂರು ಸ್ವೀಕರಿಸಿ, ಸಮಸ್ಯೆಗೆ ತುರ್ತಾಗಿ ಸ್ಪಂದಿಸಬೇಕು. ಅದರಲ್ಲೂ ಮಹಿಳೆಯರು ಠಾಣೆಗೆ ಬಂದಾಗ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರಗೆ ಸೂಚಿಸಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ತಹಸೀಲ್ದಾರ್ ಸಿದರಾಯ ಭೋಸಗಿ, ತಾಪಂ ಇಒ ಶಿವಾನಂದ ಕಲ್ಲಾಪುರ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಂಜುನಾಥ ಸೌಂದಲಗೇಕರ ಇತರರಿದ್ದರು.