ಅಂಕಲಿಯ ಶಿವಾಲಯದಲ್ಲಿ ಆಯೋಜಿಸಿದ್ದ ಅಂತರ್ ಶಾಲಾ ಕಲಾ, ವಾಣಿಜ್ಯ ಉತ್ಸವ ಮತ್ತು ವಿಜ್ಞಾನ ವಸ್ತುಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು. ಪಿ.ಎಸ್.ರತ್ತು, ಸುರೇಶ ಪಾಟೀಲ, ಬಿ.ಎಸ್.ಅಂಬಿ, ಪಿ.ಎನ್.ತಳವಾರ ಇತರರಿದ್ದರು. 
ಬೆಳಗಾವಿ

ಹಿಂಜರಿಕೆಯಿಂದ ಹೊರಬರಲಿ

ಮಾಂಜರಿ: ವಸ್ತುಪ್ರದರ್ಶನಗಳು ಮಕ್ಕಳ ಬುದ್ಧಿಮಟ್ಟ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ ಎಂದು ಕೆಎಲ್‌ಇ ಶಿಕ್ಷಣ ಸಂಸ್ಥೆಯ ಶಿರಗುಪ್ಪಿ ಮಹಾವಿದ್ಯಾಲಯದ ಭೌತಶಾಸ್ತ್ರ ಉಪನ್ಯಾಸಕಿ ಪಿ.ಎಸ್.ರತ್ತು ಹೇಳಿದರು.
ಸಮೀಪದ ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಸಂಸ್ಥೆಯ ಶ್ರೀಮತಿ ಶಾರದಾದೇವಿ ಕೋರೆ ಪದವಿಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಶನಿವಾರ ಶಿವಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರ್ ಶಾಲಾ ಕಲಾ, ವಿಜ್ಞಾನ ಉತ್ಸವ ಮತ್ತು ವಿಜ್ಞಾನ ವಸ್ತುಪ್ರದರ್ಶನದಲ್ಲಿ ಮಾತನಾಡಿ, ಮಕ್ಕಳು ಹಿಂಜರಿಕೆ ಬಿಟ್ಟು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಸ್ಥಾನಿಕ ಸಲಹಾ ಸಮಿತಿ ಅಧ್ಯಕ್ಷ ಸುರೇಶ ಪಾಟೀಲ ಮಾತನಾಡಿ, ಮಕ್ಕಳಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆ ಹಾಗೂ ವಿವಿಧ ಮಾದರಿಯ ತಂತ್ರಜ್ಞಾನದ ಕುರಿತು ಪ್ರತ್ಯೇಕ ವಿಭಾಗ ಆರಂಭಿಸಿ ನುರಿತ ತಂತ್ರಜ್ಞರಿಂದ ಅರಿವು ಮೂಡಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಕೆಎಲ್‌ಇ ಸಂಸ್ಥೆಯ ಅಜೀವ ಸದಸ್ಯ ಬಿ.ಎಸ್.ಅಂಬಿ ಮಾತನಾಡಿ, ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಿಂದ ಮಕ್ಕಳ ಕ್ರಿಯಾತ್ಮಕತೆ ಹೊರಹೊಮ್ಮುತ್ತದೆ ಎಂದರು. ಪ್ರಾಚಾರ್ಯ ಪಿ.ಎನ್.ತಳವಾರ ಅನಿಸಿಕೆ ಹಂಚಿಕೊಂಡರು. ಸುಬ್ಬರಾವ ಎಂಟೆತ್ತಿನವರ, ಆರ್.ಸಿ.ಪಾಟೀಲ ಇತರರಿದ್ದರು.