ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್‌ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ಬಿಡುಗಡೆ ಸಮಾರಂಭದ ನೇರ ಪ್ರಸಾರ ಕಾರ್ಯಕ್ರಮವನ್ನು ತಹಸೀಲ್ದಾರ್ ಸದಾಶಿವ ಮಕ್ಕೋಜಿ ಉದ್ಘಾಟಿಸಿದರು. ಡಾ.ಮಂಜುನಾಥ ಚೌರಡ್ಡಿ, ಸಲೀಂ ಸಂಗತ್ರಾಸ, ಡಾ.ಎಸ್.ಎಸ್.ಹಿರೇಮಠ ಇತರರಿದ್ದರು.
ಬೆಳಗಾವಿ: ರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಮೂಲಕ ಸುಸ್ಥಿರ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಹಾಗೂ ದೇಶದ ಆಹಾರ ಉತ್ಪಾದನೆ ಬಲಪಡಿಸಬೇಕೆಂದು ಬೈಲಹೊಂಗಲ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಸಲಹೆ ನೀಡಿದರು.
ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್‌ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತಿನ ಹಣ ಬಿಡುಗಡೆ ಸಮಾರಂಭದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಎಲ್‌ಇ ಸಂಸ್ಥೆ ಶಿಕ್ಷಣ, ವೈದ್ಯಕೀಯ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಕೃಷಿ ವಿಜ್ಞಾನ ಕೇಂದ್ರದ ಮೂಲಕ ರೈತರಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡುವ ಜತೆಗೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸುವಂತೆ ಸಲಹೆ ನೀಡುವ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಸಹಕಾರ ನೀಡುತ್ತಿದೆ ಎಂದು ಶ್ಲಾಘಿಸಿದರು.
ಬೆಳಗಾವಿ ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಸಲೀಂ ಸಂಗತ್ರಾಸ ಮಾತನಾಡಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ದೊರೆಯುವ ಆರ್ಥಿಕ ನೆರವನ್ನು ಕೃಷಿ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ, ಕೇಂದ್ರದ ವಿಜ್ಞಾನಿ ಡಾ.ಎಸ್.ಎಸ್. ಹಿರೇಮಠ ಮಾತನಾಡಿದರು. ವಿಜ್ಞಾನಿ ಎಸ್.ಎಂ.ವಾರದ, ಪ್ರವೀಣ ಯಡಹಳ್ಳಿ, ಡಾ.ಭಾವಿನಿ ಪಾಟೀಲ, ಡಾ.ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ಮಂಜುನಾಥ ಪಿ.ಐ., ವಿನೋದ ಕೋಚಿ ಇತರರಿದ್ದರು.