ನಿಪ್ಪಾಣಿಯ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಹಮ್ಮಿಕೊಂಡಿದ್ದ ಕೃಷಿ ಉತ್ಸವದಲ್ಲಿ ಕಬ್ಬು ಬೆಳೆ ಕೃಷಿ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಸುರೇಶ ದೇಸಾಯಿ ಅವರನ್ನು ಬಸವಪ್ರಸಾದ ಜೊಲ್ಲೆ ಸನ್ಮಾನಿಸಿದರು.
ನಿಪ್ಪಾಣಿ: ಇಡೀ ದೇಶಕ್ಕೆ ಅನ್ನ ನೀಡುತ್ತಿದ್ದ ಪಂಜಾಬ ರಾಜ್ಯ ಇಂದು ಕೃಷಿಯಲ್ಲಿ ತೊಂದರೆ ಅನುಭವಿಸುತ್ತಿದೆ. ಹೈಬ್ರೀಡ್ ಬೀಜ, ರಾಸಾಯನಿಕ ಮತ್ತು ಕೀಟನಾಶಕ ಸಿಂಪಡಣೆಯಿಂದ ಅಲ್ಲಿನ ಬಹುತೇಕ ಜಮೀನು ಸಾರ ಕಳೆದುಕೊಂಡಿದೆ. ಹೀಗಾಗಿ, ಪಂಜಾಬ ರೈತರು ಈಗ ಕರ್ನಾಟಕದ ಕೃಷಿಯತ್ತ ಮುಖ ಮಾಡುತ್ತಿದ್ದಾರೆ ಎಂದು ಕೃಷಿತಜ್ಞ ಸುರೇಶ ದೇಸಾಯಿ ಹೇಳಿದರು.
ಪಟ್ಟಣದಲ್ಲಿ ಜೊಲ್ಲೆ ಗ್ರೂಪ್ ಆಶ್ರಯದಲ್ಲಿ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಆಯೋಜಿಸಿರುವ ಕೃಷಿ ಉತ್ಸವದ ಉಪನ್ಯಾಸ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿ, ರಾಸಾಯನಿಕ ಮುಕ್ತ ಕೃಷಿ ಅಗತ್ಯವಾಗಿದ್ದು, ರೈತರು ಸಾವಯವ ಕೃಷಿ ಕೈಗೊಳ್ಳಬೇಕು. ಭಾರತದಲ್ಲಿ ಕಬ್ಬು ಕೇವಲ ಸಕ್ಕರೆ ತಯಾರಿಕೆಗಷ್ಟೇ ಅಲ್ಲದೆ ಕಾಗದ, ಮದ್ಯ ತಯಾರಿಕೆಗೂ ಬಳಕೆಯಾಗುತ್ತಿದೆ. ರೈತರು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಕಬ್ಬು ಬೆಳೆಯುವ ಜತೆ ಅರಿಶಿನ,
ಬಾಳೆ, ಕಡಲೆ, ಈರುಳ್ಳಿ ಕೃಷಿ ಮಾಡುವುದು ಲಾಭದಾಯಕ ವಾಗಿರುತ್ತದೆ ಎಂದರು.
ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ಕೃಷಿ ಅಧಿಕಾರಿ ಡಾ.ದತ್ತಾ ಮೇತ್ರೆ ಬೆಳೆ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು. ಸಂಚಾಲಕ ಸುಹಾಸ ಗೂಗೆ, ಜೊಲ್ಲೆ ಗ್ರ್ರೂಪ್ ಉಪಾಧ್ಯಕ್ಷ
ಬಸವಪ್ರಸಾದ ಜೊಲ್ಲೆ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾಂವೆ, ಡಾ.ವೈಭವ ಭಿಡೆ, ಪ್ರಭು ದೇಸಾಯಿ, ಗಜಾನನ ರಾಮನಕಟ್ಟಿ ಇತರರಿದ್ದರು. ಪ್ರವೀಣ ಶಿಂಧೆ ನಿರೂಪಿಸಿದರು.