ತೆಲಸಂಗ ಗ್ರಾಮದಲ್ಲಿ ಎಂ.ವೈ.ಖ್ಯಾಡಿ ಶೈಕ್ಷಣಿಕ ದತ್ತಿನಿಧಿ ಅಭಿವೃದ್ಧಿ ಸಂಘದಿಂದ ಸ್ನೇಹ ಚೊಳ್ಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ವೀರೇಶ್ವರ ದೇವರು, ಬಸವಲಿಂಗ ಸ್ವಾಮೀಜಿ, ಬಾಬುರಾವ ಮಹಾರಾಜರು ಇತರರಿದ್ದರು. 
ಬೆಳಗಾವಿ

ಪ್ರತಿಯೊಬ್ಬರೂ ಮೌಲ್ಯ ಅಳವಡಿಸಿಕೊಳ್ಳಲಿ

ಪ್ರಶಾಂತ ಹೂಗಾರ
ತೆಲಸಂಗ: ಸಮಾಜಕ್ಕೆ ನೀಡುವ ಕೊಡುಗೆ ಮೇಲೆ ನಮ್ಮ ಮೌಲ್ಯ ನಿಂತಿದೆ. ಹಾಗಾಗಿ, ಎಲ್ಲರೂ ಉತ್ತಮ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.
ಗ್ರಾಮದ ಎಂ.ವೈ.ಖ್ಯಾಡಿ ಶೈಕ್ಷಣಿಕ ದತ್ತಿನಿಧಿ ಅಭಿವೃದ್ಧಿ ಸಂಘದಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯಧನ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ದಿ.ಮಲ್ಲಪ್ಪ ಖ್ಯಾಡಿ ಕೋಟ್ಯಂತರ ರೂ. ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿದ್ದಾರೆ. ಅವರ ಬದುಕು ಎಲ್ಲರಿಗೂ ಮಾದರಿ ಎಂದರು.
ವಿರಕ್ತಮಠದ ಬಸವಲಿಂಗ ಸ್ವಾಮೀಜಿ, ಹೊನವಾಡದ ಬಾಬುರಾವ ಮಹಾರಾಜರು, ಬಣಿಜಿಗ ಸಮುದಾಯದ ಅಧ್ಯಕ್ಷ ಮಲ್ಲಿಕಾರ್ಜುನ ರೋಡಗಿ, ಬಿ.ಆರ್.ಪಿ ಮೋಹನ ಕುಲಕರ್ಣಿ ಮಾತನಾಡಿ, ಮಲ್ಲಪ್ಪ ಖ್ಯಾಡಿ ಅವರ ಬಡ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಒಂದು ಕೋಟಿ ರೂ. ಬ್ಯಾಂಕಿನಲ್ಲಿ ಇರಿಸಿ ಅದರ ಬಡ್ಡಿಯನ್ನು ವಿದ್ಯಾರ್ಥಿಗಳ ಕಲಿಕೆಗೆ ಬಳಸುವಂತೆ ವ್ಯವಸ್ಥೆ ಮಾಡಿ, ಸಾವಿನ ಬಳಿಕವೂ ದಾನಮಯಿ ಆಗಿದ್ದಾರೆ ಎಂದು ಸ್ಮರಿಸಿದರು.
ಇಂಜಿನಿಯರಿಂಗ್ ವಿಭಾಗದ ಸುರೇಶ ಅಸ್ಕಿಗೆ 80 ಸಾವಿರ ರೂ., ಸ್ನೇಹ ಚೊಳ್ಳಿಗೆ 50 ಸಾವಿರ ರೂ., ಸುಮೀತ್ ಕಂದಾರಿಗೆ 50 ಸಾವಿರ ರೂ., ಸುನೀಲ ದಳವಾಯಿಗೆ 30,610 ರೂ., ವೆಟರ್ನರಿ ಶಿಕ್ಷಣಕ್ಕಾಗಿ ಪ್ರದೀಪ್ ನಾಟಿಕರಗೆ 12,955 ರೂ. ಬಿ.ಇಡಿ ವ್ಯಾಸಂಗಕ್ಕಾಗಿ ಪೂಜಾ ಬೀಳೂರುಗೆ 13,000 ರೂ. ಪದವಿ ಮತ್ತು ಪದವಿಪೂರ್ವ ಹಂತದ 24 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು 52 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಯಿತು. ದತ್ತಿ ನಿಧಿ ಸಂಘದ ಅಧ್ಯಕ್ಷ ಪ್ರಕಾಶ ಖ್ಯಾಡಿ ಇತರರಿದ್ದರು.