ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಹಾಸ್ಯಕೂಟದ ವಾರ್ಷಿಕೋತ್ಸವದಲ್ಲಿ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರೊ.ಜಿ.ಕೆ.ಕುಲಕರ್ಣಿ, ಗುಂಡೇನಟ್ಟಿ ಮಧುಕರ, ಡಾ.ಅರವಿಂದ ಕುಲಕರ್ಣಿ, ಎಲ್.ಎಸ್.ಶಾಸ್ತ್ರಿ ಇತರರಿದ್ದರು.
ಬೆಳಗಾವಿ: ಹರಟೆ ಎನ್ನುವುದು ಎಲ್ಲರೂ ಸೇರಿ ಸಂಭ್ರಮಿಸುವ ಸಮಯ. ವೇದಿಕೆಯಲ್ಲಿದ್ದಾಗ ಹರಟೆ ಮಧ್ಯೆ ವಾದ-ಪ್ರತಿವಾದಗಳಾದರೂ ಅದೊಂದು ಆರೋಗ್ಯಕರವಾದ ಚರ್ಚೆಯಾಗಿರುತ್ತದೆ. ವೇದಿಕೆಯಿಂದ ಕೆಳಗಿಳಿದೊಡನೆ ಎಲ್ಲರೂ ಒಂದೇ ಆಗಿರಬೇಕು ಎಂದು ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಹೇಳಿದರು.
ನಗರದ ಹಿಂದವಾಡಿಯ ಐಎಂಇಆರ್ ಸಭಾಭವನದಲ್ಲಿ ಈಚೆಗೆ ಏರ್ಪಡಿಸಿದ್ದ ಹಾಸ್ಯಕೂಟ ಸಂಘಟನೆಯ 12ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾರಂಭದ ಬಳಿಕ ನರಸಿಂಹಮೂರ್ತಿ ಸೂತ್ರಧಾರಿಕೆಯಲ್ಲಿ ನಡೆದ ‘ಹೆಂಡತಿ ಜೀವ ಹಿಂಡುತಿ’ ಹರಟೆಯಲ್ಲಿ ಹೆಂಡತಿ ಜೀವ ಹಿಂಡುತ್ತಾಳೆ ಎಂದು ಗುಂಡೇನಟ್ಟಿ ಮಧುಕರ, ಪ್ರೊ.ಜಿ.ಕೆ.ಕುಲಕರ್ಣಿ, ಡಾ.ಅರವಿಂದ ಕುಲಕರ್ಣಿ, ರಾಜೇಂದ್ರ ಭಂಡಾರಿ ಹಾಗೂ ಹೆಂಡತಿ ಜೀವ ಹಿಂಡುವುದಿಲ್ಲವೆಂದು ಅರವಿಂದ ಹುನಗುಂದ, ಜಿ.ಎಸ್.ಸೋನಾರ, ಎಂ.ಬಿ.ಹೊಸಳ್ಳಿ, ತಾನಾಜಿ ಹಾಸ್ಯಮಯವಾಗಿ ಪ್ರತಿಪಾದಿಸಿದರು. ಲೇಖಕ ಎಲ್.ಎಸ್.ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ದೀಪಾ ಪದಕಿ ಪ್ರಾರ್ಥಿಸಿದರು. ಚಿದಂಬರ ಮುನವಳ್ಳಿ ಪರಿಚಯಿಸಿದರು. ಪಾಂಡುರಂಗ ಮಾರಿಹಾಳ ವಂದಿಸಿದರು.