ಬೆಳಗಾವಿಯಲ್ಲಿ ಬುಧವಾರ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂದೀಪ ಪಾಟೀಲ ಇದ್ಧಾರೆ.
ಬೆಳಗಾವಿ : ಜಿಲ್ಲೆಯಾದ್ಯಂತ 1200 ಪ್ರೌಢಶಾಲೆಗಳಲ್ಲಿ ಮಾ.7ರಂದು ಏಕಕಾಲಕ್ಕೆ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಏಕಕಾಲಕ್ಕೆ ಇಷ್ಟು ಸಂಖ್ಯೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ರಾಜ್ಯದಲ್ಲೇ ಇದು ಮೊದಲ ದಾಖಲೆ. ಪೋಕ್ಸೋ ಕಾನೂನು, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ನಗರದ ಟಿಳಕವಾಡಿ ಕೆಎಲ್ಎಸ್ ಹೈಸ್ಕೂಲ್‌ನಲ್ಲಿ ಆಯೋಜಿಸಿರುವ ಮುಖ್ಯ ಕಾರ್ಯಕ್ರಮವನ್ನು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ನ್ಯಾಯಮೂರ್ತಿ ಜಯಂತ ಬ್ಯಾನರ್ಜಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಉದ್ಘಾಟಿಸುವರು. ನಮ್ಮ 65 ಜನ ನ್ಯಾಯಾಧೀಶರು ಒಂದೊಂದು ಶಾಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ವಕೀಲರು, ಅರೆಕಾಲಿಕ ಸ್ವಯಂ ಸೇವಕರು, ಮಧ್ಯಸ್ಥಿಕೆದಾರರನ್ನು ಆಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಲು ಈಗಾಗಲೇ ಗುರುತು ಮಾಡಿದ್ದೇವೆ ಎಂದು ಹೇಳಿದರು.
ಬೆಳಗಾವಿ ನಗರದಲ್ಲಿ 25 ಹೈಸ್ಕೂಲ್‌ನಲ್ಲಿ ಇಲ್ಲಿನ ನ್ಯಾಯಾಧೀಶರುಗಳೇ ಪಾಲ್ಗೊಳ್ಳುತ್ತಾರೆ. ನ್ಯಾಯಾಧೀಶರೇ ನೇರವಾಗಿ ಮಕ್ಕಳೊಂದಿಗೆ ಸಂವಾದ ಮಾಡಲಿದ್ದಾರೆ. ಈ ಮೂಲಕ ಮಕ್ಕಳಲ್ಲಿ ತಮಗಾಗಿ ಇರುವ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ವಿಡಿಯೋ ತುಣುಕುಗಳ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗುವುದು. ಇದರಿಂದ ಜಿಲ್ಲೆಯಲ್ಲಿನ ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಗಳನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ ಎಂದು ವಿವರಿಸಿದರು.
ಈ ವರ್ಷದ ಮೊದಲನೇ ಲೋಕ ಅದಾಲತ್ ಮಾ.14ರಂದು ಜಿಲ್ಲೆಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜನೆಯಾಗಿದೆ. ಇದಕ್ಕಾಗಿ 85 ಲೋಕ ಅದಾಲತ್ ಪೀಠಗಳನ್ನು ಸ್ಥಾಪಿಸಲಾಗುವುದು. 28 ಸಾವಿರ ಪ್ರಕರಣ ರಾಜಿಗೆ ಗುರುತು ಮಾಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿದ್ದ 20,408 ಹಾಗೂ 3 ಲಕ್ಷ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದೇವೆ. ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸುವ ಮಧ್ಯಸ್ಥಿಕೆದಾರರ ನೇಮಕವಾಗಿದೆ. ಇವರು ಕೌಟುಂಬಿಕ ಕಲಹ, ವೈವಾಹಿಕ ಕಲಹಗಳನ್ನು ಮಧ್ಯಸ್ಥಿಕೆ ವಹಿಸಿ ರಾಜಿ ಮಾಡಿಸುತ್ತಾರೆ. ಇದಕ್ಕಾಗಿ 90 ದಿನಗಳ ಕಾರ್ಯಕ್ರಮ ಏಪ್ರಿಲ್‌ವರೆಗೂ ಇರಲಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.