ಚಿಕ್ಕೋಡಿ ಪಟ್ಟಣದ ಸಿಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಸ್ಟಡಿ ಮ್ಯಾರಥಾನ್ ಪುಸ್ತಕ ಬಿಡುಗಡೆ ಮಾಡಲಾಯಿತು. ಜಗದೀಶ ಕವಟಗಿಮಠ, ಡಾ.ಮೌನೇಶ್ವರ ಬಡಿಗೇರ, ಮಲ್ಲಿಕಾರ್ಜುನ ಕವಟಗಿಮಠ, ಸಾಗರ ಬಿಸ್ಕೋಪ್ ಇತರರಿದ್ದರು. 
ಬೆಳಗಾವಿ

ಸ್ವಾವಲಂಬಿಯಾಗಿ ಬದುಕುವ ಕಲೆ ಅರಿಯಿರಿ

ಚಿಕ್ಕೋಡಿ: ಪುಸ್ತಕ ಜ್ಞಾನದೊಂದಿಗೆ ಸ್ವಾವಲಂಬಿಯಾಗಿ ಬದುಕುವ ಕಲೆ ಅರಿತುಕೊಳ್ಳಬೇಕು ಎಂದು ಸಿಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಕವಟಗಿಮಠ ಹೇಳಿದರು. ಇಲ್ಲಿನ ಸಿಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಉಚಿತ ವಿತರಣೆಗೆ ರೂಪಿಸಿರುವ ‘ಸ್ಟಡಿ ಮ್ಯಾರಥಾನ್’ ಪುಸ್ತಕ ಬಿಡುಗಡೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಸಕ್ತ ವರ್ಷದಿಂದ ಸಿಎಲ್‌ಇ ಸಂಸ್ಥೆ ಎಲ್ಲ ವಿದ್ಯಾರ್ಥಿಗಳಿಗೆ ಸಿಎನ್‌ಸಿ ಆಪ್‌ರೇಟಿಂಗ್, ವಾಹನ ಚಾಲನೆ ಮತ್ತು ಮೋಟಾರ್ ವೈಂಡಿಂಗ್ ತರಬೇತಿ ಪ್ರಾರಂಭಿಸುವ ಗುರಿ ಇದೆ. ಚಿಕ್ಕೋಡಿ ಸಾಯಿ ಸೌಹಾರ್ದ ಕ್ರೆಡಿಟ್ ಸೊಸೈಟಿಯಿಂದ ಸ್ವಯಂ-ಉದ್ಯೋಗ ಕೈಗೊಳ್ಳಲು ಸಾಲ-ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು. ಸಮಾಜಶಾಸದ ಸಹಾಯಕ ಪ್ರಾಧ್ಯಾಪಕ ಡಾ.ಮೌನೇಶ್ವರ ಬಡಿಗೇರ ಮಾತನಾಡಿ, ವಿದ್ಯಾರ್ಥಿಗಳು ನಿಯಮಿತವಾಗಿ ಅಧ್ಯಯನ ಮಾಡಿದರೆ ಉದ್ಯೋಗಗಳು ಅರಸಿ ಬರುತ್ತವೆ ಎಂದರು.
ಚಿಕ್ಕೋಡಿ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.
‘ಸ್ಟಡಿ ಮ್ಯಾರಥಾನ್’ ಪ್ರಮುಖ ಸಂಪಾದಕರಾದ ಎಸ್.ಎಸ್.ಮೆಟಗುಡ್ಡ, ಶ್ರೀಕಾಂತ ಕಾಗೆ, ಸುಪ್ರಿಯಾ ಶೇಗುಣಸಿ ಹಾಗೂ ತಾಂತ್ರಿಕ ಸಹಾಯಕ ಜಗದೀಶ ಕರೋಶಿ, ಪ್ರತಿಭಾವಂತ ವಿದ್ಯಾರ್ಥಿಗಳಾದ ಗೌರಿ ಮಾಳಗೆ, ಅನಿತಾ ಮದೆಳ್ಳಿ, ಶೀಲಾ ಕರನೂರೆ, ಸುಪ್ರಿಯಾ ಕೊಟಬಾಗಿ, ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ 75 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿಎಲ್‌ಇ ಸಂಸ್ಥೆ ನಿರ್ದೇಶಕ ಮಲ್ಲಿಕಾರ್ಜುನ ಕವಟಗಿಮಠ, ಆಡಳಿತಾಧಿಕಾರಿ ಸಾಗರ ಬಿಸ್ಕೋಪ್, ಪದವಿ ಪ್ರಾಚಾರ್ಯ ಎಸ್.ಎಸ್.ಮೆಟಗುಡ್ಡ, ಮಹಾವೀರ ಸನದಿ,ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರವೀಣ ಪಾಟೀಲ, ಸಮೃದ್ಧಿ ಬನ್ನನವರ, ರವಿ ಮಾಯನ್ನವರ, ರಮೇಶ ಮರೆಪ್ಪಗೋಳ, ಜಿ.ಬಿ.ಮೋಳಗಿ ಇತರರಿದ್ದರು.