ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಕಾನೂನು ಉತ್ಸವವನ್ನು ನ್ಯಾಯಾಧೀಶ ಮಂಜುನಾಥ ನಾಯಕ ಉದ್ಘಾಟಿಸಿದರು.
ಬೆಳಗಾವಿ : ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಜ್ಞಾನಕ್ಕೆ ಸೀಮಿತವಾಗದೆ, ಕಾಲೇಜು ಆಯೋಜಿಸುವ ವಿವಿಧ ಕಾನೂನು ಚಟುವಟಿಕೆಗಳು, ವಾದ-ಪ್ರತಿವಾದ ಸ್ಪರ್ಧೆಗಳು, ಮೂಟ್ ಕೋರ್ಟ್ ಕಾರ್ಯಕ್ರಮ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ವೃತ್ತಿಪರ ಕೌಶಲ ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ಕರೆ ನೀಡಿದರು.
ಕೆ.ಎಲ್.ಇ. ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಕಾನೂನು ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ಕಾನೂನೋತ್ಸವಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ವಾಕ್ಚಾತುರ್ಯ ಹಾಗೂ ಕಾನೂನು ಜ್ಞಾನವನ್ನು ವೃದ್ಧಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ನ್ಯಾಯಾಂಗ ವ್ಯವಸ್ಥೆಯ ಸುಸೂತ್ರ ನಿರ್ವಹಣೆಯಲ್ಲಿ ವಕೀಲರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ವಕೀಲ ವೃತ್ತಿ ಕೇವಲ ಉದ್ಯೋಗವಲ್ಲ, ಸಮಾಜ ಸೇವೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಗೌರವಾನ್ವಿತ ಜವಾಬ್ದಾರಿಯಾಗಿದೆ. ಯುವ ವಕೀಲರು ಸೂಕ್ಷ್ಮ ಮನೋಭಾವ ಹೊಂದಿರಬೇಕು. ಸಮಾಜದ ಅಗತ್ಯತೆಗಳು, ಜನರ ಸಂಕಷ್ಟಗಳು ಮತ್ತು ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ನ್ಯಾಯಾಲಯಕ್ಕೆ ಸರಿಯಾದ ಮಾರ್ಗದರ್ಶನ, ಸಹಕಾರ ನೀಡುವುದು ಪ್ರತಿಯೊಬ್ಬ ಭವಿಷ್ಯದ ವಕೀಲನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪ್ರಾಮಾಣಿಕತೆ, ನೈತಿಕ ಮೌಲ್ಯಗಳು ಮತ್ತು ಮಾನವೀಯತೆ ಗುಣಗಳನ್ನು ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾನೂನು ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಕೇವಲ ಜ್ಞಾನ ಸಾಕಾಗುವುದಿಲ್ಲ. ಸಮಾಜದ ಪರ ಕಾಳಜಿ, ನ್ಯಾಯದ ಮೇಲಿನ ನಿಷ್ಠೆ ಹಾಗೂ ಸೇವಾ ಮನೋಭಾವವೂ ಅಗತ್ಯ. ಯುವ ಕಾನೂನು ವಿದ್ಯಾರ್ಥಿಗಳು ದೇಶದ ನ್ಯಾಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ, ಹಿರಿಯ ವಕೀಲ ಆರ್.ಬಿ.ಬೆಲ್ಲದ ಮಾತನಾಡಿ, ಕೆಎಲ್ಇ ಸಂಸ್ಥೆಯು ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ವಿವರಿಸಿ, ವಿದ್ಯಾರ್ಥಿಗಳು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಅಧ್ಯಯನಶೀಲರಾಗಬೇಕು. ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಗಳಿಸಬೇಕೆಂದರು.
ಕಾನೂನು ಉತ್ಸವದಲ್ಲಿ ಗೋವಾದ ವಿ.ಎಂ.ಸಲಗಾಂವ್ಕರ್ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಬಾಬಾಗೌಡ ಪಾಟೀಲ, ಬೆಲ್ಲದ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಸಂತೋಷ ಪಾಟೀಲ ಇತರರಿದ್ದರು.
ಪ್ರಾಂಶುಪಾಲ ಡಾ.ಜ್ಯೋತಿ ಜಿ. ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯತ್ರಿ ನಿರೂಪಿಸಿದರು. ಸಾಯಿರಾಜ ವಂದಿಸಿದರು. ದೇಶದ ವಿವಿಧ ಭಾಗಗಳಿಂದ 16ಕ್ಕೂ ಹೆಚ್ಚು ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.