ಬೆಳಗಾವಿಯಲ್ಲಿ ಸೋಮವಾರ ಜರುಗಿದ ವಿಶ್ವಮಾನವ ದಿನಾಚರಣೆಯನ್ನು ಮೇಯರ್ ಮಂಗೇಶ ಪವಾರ ಉದ್ಘಾಟಿಸಿದರು. ವಾಣಿ ಜೋಶಿ, ಉದಯಕುಮಾರ ತಳವಾರ, ಬಸವರಜ ಹೆಗ್ಗನಾಯಕ, ವಿದ್ಯಾವತಿ ಭಜಂತ್ರಿ ಇತರರಿದ್ದರು.
ಬೆಳಗಾವಿ: ಕುವೆಂಪು ರಾಷ್ಟ್ರಕವಿಯಷ್ಟೇ ಅಲ್ಲ, ವಿಶ್ವಕವಿಯಾಗಿದ್ದವರು. ನಮ್ಮ ನಾಡಿಗೆ ಅಮೂಲ್ಯ ಕೊಡುಗೆ ನೀಡಿರುವ ಅವರ ಸಾಹಿತ್ಯವನ್ನು ಓದಿ ತಿಳಿದುಕೊಳ್ಳುವ ಮೂಲಕ ಜೀವನಕ್ಕೆ ಮಾರ್ಗದರ್ಶನ ಮಾಡಿಕೊಳ್ಳಬೇಕು ಎಂದು ಮಹಾಪೌರ ಮಂಗೇಶ ಪವಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಸೋಮವಾರ ಕುವೆಂಪು ಜನ್ಮದಿನ ಪ್ರಯುಕ್ತ ಏರ್ಪಡಿಸಿದ್ದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಜಯಂತಿಗಳು ಆಚರಣೆಗೆ ಸೀಮಿತವಾಗದೇ, ಆಯಾ ಸಾಧಕರ ಜೀವನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯವಾಗಬೇಕು ಎಂದರು.
ಬೈಲಹೊಂಗಲದ ಕೆಅರ್‌ಸಿಎಸ್ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಂ.ವೈ.ಕಾದ್ರೋಳಿ ಉಪನ್ಯಾಸದಲ್ಲಿ ಮಾತನಾಡಿ, ಕನ್ನಡ ನೆಲದ ಸಂಸ್ಕೃತಿಯನ್ನು ಕುವೆಂಪುರವರು ತಮ್ಮ ಸಾಹಿತ್ಯದ ಮೂಲಕ ವಿಶ್ವದಾದ್ಯಂತ ಪಸರಿಸಿದವರು. ಎಲ್ಲರನ್ನೂ ಸಮಾನರಾಗಿ ನೋಡುವುದು. ಇತರೆ ಜೀವಿಗಳಿಗೂ ಭೂಮಿಯ ಮೇಲೆ ಬದುಕಲು ಅವಕಾಶವಿದೆ ಎಂಬುದೇ ಅವರ ವಿಶ್ವ ಮಾನವ ಸಂದೇಶವಾಗಿದೆ. ಅವರ ವಿಚಾರಗಳು ಸಾಹಿತ್ಯದ ಮೂಲಕ ನಮ್ಮಲ್ಲಿ ಜೀವಂತವಾಗಿ ಉಳಿದಿವೆ. ಅವುಗಳನ್ನು ಪಾಲಿಸಬೇಕು ಎಂದು ಹೇಳಿದರು.
ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಉಪ ಮಹಾಪೌರ ವಾಣಿ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಇತರರಿದ್ದರು.