ಬೆಳಗಾವಿಯಲ್ಲಿ ಕೆ.ಎಸ್.ಎನ್ ಟ್ರಸ್ಟ್ ಆಯೋಜಿಸಿರುವ ಗೀತ ಗಾಯನ ತರಬೇತಿಯನ್ನು ಮಂಗಳವಾರ ಸರಜೂ ಕಾಟ್ಕರ್ ಉದ್ಘಾಟಿಸಿದರು.  
ಬೆಳಗಾವಿ

ಕೆಎಸ್‌ಎನ್ ಗೀತೆಗಳ ಗಾಯನ ತರಬೇತಿಗೆ ಚಾಲನೆ

ಡಿ.ವಿ. ಕಮ್ಮಾರ
ಬೆಳಗಾವಿ: ಯುವಕರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವಲ್ಲಿ ಕವಿ, ಸಾಹಿತಿಯ ಜತೆಗೆ ಗಾಯಕರ ಪಾತ್ರವೂ ಬಹುದೊಡ್ಡದು ಎಂದು ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಸರಜೂ ಕಾಟ್ಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಏರ್ಪಡಿಸಿರುವ ಎರಡು ದಿನಗಳ ಕೆಎಸ್‌ಎನ್ ಗೀತ ಗಾಯನ ತರಬೇತಿ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿನ ಬೇಂದ್ರೆ, ಬಸವರಾಜ ಕಟ್ಟೀಮನಿ ಹೆಸರಿನಂತೆ ದಕ್ಷಿಣ ಕರ್ನಾಟಕದ ಮೈಸೂರು ಸೀಮೆಯಲ್ಲಿ ಮೈಸೂರು ಮಲ್ಲಿಗೆ ಕವಿಯಾಗಿ ಕೆ.ಎಸ್.ನರಸಿಂಹಸ್ವಾಮಿ ಖ್ಯಾತನಾಮರಾಗಿದ್ದಾರೆ. ದೂರದ ಮಂಡ್ಯ ಮತ್ತು ಬೆಳಗಾವಿಯನ್ನು ಬೆಸೆಯುವ ರೀತಿಯಲ್ಲಿ ಟ್ರಸ್ಟ್ ಈ ತರಬೇತಿ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಕೆಎಸ್‌ಎನ್, ಬೇಂದ್ರೆ ಮತ್ತು ಬಸವರಾಜ ಕಟ್ಟೀಮನಿ ಪ್ರತಿಷ್ಠಾನಗಳು ಕನ್ನಡ ನಾಡು, ಭಾಷೆ ಗಟ್ಟಿಗೊಳಿಸಲು ತ್ರಿಮೂರ್ತಿಯಂತೆ ಶ್ರಮಿಸಲು ಸಿದ್ಧವಿದೆ. ಮೊಬೈಲ್ ಪೀಳಿಗೆಗೆ ಬಲಿಯಾಗುತ್ತಿರುವ ಯುವ ಪೀಳಿಗೆಗೆ ಕಾವ್ಯ ಮತ್ತು ಸಾಹಿತ್ಯಲೋಕ ಪರಿಚಯಿಸುತ್ತಿರುವ ಇಂತಹ ಸತ್ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಮಾರಂಭದ ಬಳಿಕ ಕೆ.ಎಸ್‌ಎನ್ ರಚನೆಯ ‘ಪರ್ವತ ಹಿಮ ಮೌನದಲಿ’, ‘ದೇವ ನಿನ್ನ ಮಾಯೆಗಂಜಿ ನಡುಗಿ ಬಾಳೆನು’ ಹಾಗೂ ‘ತುಂಬು ತಿಂಗಳಿನ ಮಲ್ಲಿಗೆ ಹಂಬಿನ’ ಗೀತೆಗಳ ಗಾಯನದ ಕುರಿತು ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ನಗರ ಶ್ರೀನಿವಾಸ ಉಡುಪ ತರಬೇತಿ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕೆಎಸ್‌ಎನ್ ಟಸ್ಟ್ ನಿರ್ದೇಶಕ ಮಾದಾಪುರ ಸುಬ್ಬಣ್ಣ, ಕೆ.ವಿ. ಬಲರಾಮು, ಎಂ.ಎನ್.ಸುಬ್ರಹ್ಮಣ್ಯ ಇತರರಿದ್ದರು.